ಧಾರವಾಡ:
ಭಾನುವಾರ ಇಲ್ಲಿಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಭವನದಲ್ಲಿ 50ಕ್ಕೂ ಹೆಚ್ಚು ಮಕ್ಕಳು ತಮ್ಮ ತಾಯಿಯ ಪಾದಪೂಜೆ ಮಾಡಿ ಗೌರವ ಸಲ್ಲಿಸಿದರು. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡ ಮಕ್ಕಳು ತಮ್ಮ ತಾಯಿ ಕಾಲು ತೊಳೆದು, ವಿಭೂತಿ, ಕುಂಕುಮ ಹಚ್ಚಿ, ಹೂ ಏರಿಸಿ, ಉದ್ದಿನಕಡ್ಡಿ ಬೆಳಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ಕಾರ್ಯಕ್ಕೆ ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಮೇಯರ್ ಜ್ಯೋತಿ ಪಾಟೀಲ, ಶೀಲಾ ಅಂಚಟಗೇರಿ ಹಾಗೂ ಅನ್ನಪೂರ್ಣಾ ಪಾಟೀಲ ಚಾಲನೆ ನೀಡಿದರು.
ತಾಯಿಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು. ಅದರಲ್ಲೂ ಈಗಿನ ಯುವ ಜನಾಂಗ ತಾಯಿಗೆ ಗೌರವ ಕೊಡುವ ಸಂಸ್ಕಾರ ಮಕ್ಕಳು ಕಲಿಯಬೇಕು. ಈ ಕಾರ್ಯವನ್ನು ಕಲಾ ಶಕ್ತಿ ಫೌಂಡೇಶನ್ ಮಾಡುತ್ತಿದೆ ಎಂದ ಡಾ. ಅಜಿತ ಪ್ರಸಾದ, ಬೇಸಿಗೆ ಶಿಬಿರ ಬರೀ ಪಠ್ಯ ಮಾತ್ರವಲ್ಲದೇ, ಸಂಗೀತ, ಚಿತ್ರಕಲೆ, ವ್ಯಕ್ತಿತ್ವ ರೂಪಿಸುವುದು. ಪ್ರಮುಖವಾಗಿ ಮೊಬೈಲ್ ಚಟ ಬಿಡಿಸುವ ಸಲುವಾಗಿ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುವಂತಾಗಿದೆ ಎಂದರು.ಮಕ್ಕಳ ಮನಸ್ಸು ಮೃದುವಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಉತ್ತಮ ಹವ್ಯಾಸ ಕಲಿಸಬೇಕು. ಇದು ಶಾಲೆಯಲ್ಲಿ ಆಗುವುದಿಲ್ಲ. ಆದ್ದರಿಂದ ಬೇಸಿಗೆ ರಜೆಯಲ್ಲಿ ಇಂತಹ ಶಿಬಿರಗಳ ಮೂಲಕ ಸಂಗೀತ, ನಾಟಕ ಹಾಗೂ ಇತರ ಚಟುವಟಿಕೆ ಮೂಲಕ ಮಕ್ಕಳಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.