ತೆರವಾದ ಸ್ಥಳದಲ್ಲೇ ಮತ್ತೆ ಫುಟ್ಪಾತ್‌ ಒತ್ತುವರಿ!

KannadaprabhaNewsNetwork |  
Published : Aug 17, 2026, 02:15 AM IST
ಬಸವನಗುಡಿ ಸಮೀಪದ ಗಾಂಧಿ ಬಜಾರ್‌ಗಳಲ್ಲಿ ಫುಟ್ಪಾತ್‌ ವ್ಯಾಪಾರಿಗಳನ್ನು ತೆರವುಗೊಳಿಸಿ 1 ವಾರ ಕಳೆಯುತ್ತಿದ್ದಂತೆ ಅಲ್ಲಿಯೇ ಬಂದು ಮತ್ತೆ ವ್ಯಾಪಾರ ಶುರು ಮಾಡಿದ್ದಾರೆ.  | Kannada Prabha

ಸಾರಾಂಶ

ನಗರದಲ್ಲಿ ಪಾದಚಾರಿ ರಸ್ತೆ ಒತ್ತುವರಿ ತೆರವು ಯೋಜನೆಯಲ್ಲಿ ಅಂದುಕೊಂಡಂತೆ ಗುರಿ ಮುಟ್ಟಲು ಪಾಲಿಕೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕೆಲ ರಸ್ತೆಗಳಲ್ಲಿ ಒಂದೆಡೆಯಿಂದ ತೆರವು ಮಾಡುತ್ತಾ ಬಂದರೆ, ಮತ್ತೊಂದೆಡೆ ಅದೇ ಸ್ಥಳದಲ್ಲಿ ವ್ಯಾಪಾರಿಗಳು ಮರುಸ್ಥಾಪನೆಯಾಗುತ್ತಿದ್ದಾರೆ.

ಉಮಾಶಂಕರ ಕಾರ್ಯ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಪಾದಚಾರಿ ರಸ್ತೆ ಒತ್ತುವರಿ ತೆರವು ಯೋಜನೆಯಲ್ಲಿ ಅಂದುಕೊಂಡಂತೆ ಗುರಿ ಮುಟ್ಟಲು ಪಾಲಿಕೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕೆಲ ರಸ್ತೆಗಳಲ್ಲಿ ಒಂದೆಡೆಯಿಂದ ತೆರವು ಮಾಡುತ್ತಾ ಬಂದರೆ, ಮತ್ತೊಂದೆಡೆ ಅದೇ ಸ್ಥಳದಲ್ಲಿ ವ್ಯಾಪಾರಿಗಳು ಮರುಸ್ಥಾಪನೆಯಾಗುತ್ತಿದ್ದಾರೆ.

ಕಳೆದ ಜು.1ರಿಂದ ನಗರದಲ್ಲಿ ಆರಂಭವಾದ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ದಿನಂಪ್ರತಿ ನಡೆಯುತ್ತಿದ್ದರೂ ಅಂದುಕೊಂಡಂತೆ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಸರಿಯಾಗಿ ನಡೆದಿದ್ದರೆ ಒತ್ತುವರಿ ತೆರವು ಆಗಸ್ಟ್ ಅಂತ್ಯಕ್ಕೆ ನಗರದ ಪ್ರಮುಖ ರಸ್ತೆಗಳೂ ಸೇರಿ 2000 ಕಿ.ಮೀ. ಪೂರ್ಣವಾಗ ಬೇಕಾಗಿತ್ತು.

ಆದರೆ, ಆ.15 ಕಳೆಯುತ್ತಾ ಬಂದರೂ ಇನ್ನೂ 1 ಸಾವಿರ ಕಿ.ಮೀ. ಪ್ರಮುಖ ರಸ್ತೆ ಹಾಗೂ ಪ್ರಮುಖ ರಸ್ತೆಗೆ ಹೊಂದಿಕೊಂಡ ರಸ್ತೆಗಳಲ್ಲಿ (ಆರ್ಟಿರಿಯಲ್ ರಸ್ತೆ ಅಂದರೆ ಬಸ್‌ ಸೇರಿದಂತೆ ಎಲ್ಲಾ ವಾಹನಗಳು ಸಂಚರಿಸುವ ವಾಹನಗಳು, ಸಬ್ ಆರ್ಟಿರಿಯಲ್ ರಸ್ತೆಗಳು ಅಂದರೆ ಪ್ರಮುಖ ರಸ್ತೆಗಳಿಗೆ ಹೊಂದಿಕೊಂಡಂತೆ ಇರುವ ರಸ್ತೆಗಳಲ್ಲಿ)ಒತ್ತುವರಿ ತೆರವು ಕಾರ್ಯಾಚರಣೆ ಮುಗಿದಿದೆ.

ಇಲ್ಲಿಯವರೆಗೆ ನಗರದ ಕೇಂದ್ರ(235 ಕಿಮೀ), ಉತ್ತರ(218 ಕಿಮೀ), ದಕ್ಷಿಣ(140ಕಿಮೀ), ಪೂರ್ವ(180ಕಿಮೀ) ಮತ್ತು ಪಶ್ಚಿಮ(185 ಕಿಮೀ) ಪಾಲಿಕೆ ವ್ಯಾಪ್ತಿಗಳಲ್ಲಿ ಇದುವರೆಗೆ ನಡೆದಿರುವ ಒತ್ತುವರಿ ತೆರವು ಕಾರ್ಯಾಚರಣೆ 1 ಸಾವಿರ ಕಿ.ಮೀ. ಆಸು ಪಾಸಿನಲ್ಲಿವೆ.

ಅಂದರೆ, ಸಚಿವ ಕೃಷ್ಣ ಬೈರೇಗೌಡ ಅವರು 5 ಪಾಲಿಕೆಗಳಿಗೆ ನೀಡಿದ್ದ ಟಾರ್ಗೆಟ್ 2 ಸಾವಿರ ಕಿ.ಮೀ. ವ್ಯಾಪ್ತಿಯ ಎಲ್ಲಾ ಆರ್ಟಿರಿಯಲ್ ಹಾಗೂ ಸಬ್ ಅರ್ಟಿರಿಯಲ್ ರಸ್ತೆಗಳಲ್ಲಿ ಪಾದಚಾರಿ ರಸ್ತೆ ಒತ್ತುವರಿ ತೆರವು ಮುಗಿಯಬೇಕಾಗಿತ್ತು. ಉಳಿದ 15 ದಿನಗಳ‍ಲ್ಲಿ ಉಳಿದ 1000 ಕಿ.ಮೀ. ಪಾದಚಾರಿ ರಸ್ತೆಗಳ ಒತ್ತುವರಿ ತೆರವಾಗಬೇಕು.

ಆದರೆ, ವಾಸ್ತವ ಸ್ಥಿತಿಯಲ್ಲಿ ಫುಟ್‌ಪಾತ್‌ ವ್ಯಾಪಾರಿಗಳು ಒಂದೆಡೆ ತೆರವು ಮಾಡುತ್ತಾ ಬಂದರೆ ಮತ್ತೊಂದೆಡೆ ಅದೇ ಸ್ಥಳದಲ್ಲಿ ಮತ್ತೆ ಮರುಸ್ಥಾಪನೆ ಮಾಡುತ್ತಿದ್ದಾರೆ. ಉದಾಹರಣೆಗೆ ಮಲ್ಲೇಶ್ವರಂ ಸಂಪಿಗೆ ರಸ್ತೆ ಹಾಗೂ ಬಸವನಗುಡಿ ಸಮೀಪದ ಗಾಂಧಿ ಬಜಾರ್ ಗಳಲ್ಲಿ ಫುಟ್ಪಾತ್‌ ವ್ಯಾಪಾರಿಗಳನ್ನು ತೆರವುಗೊಳಿಸಿ 1 ವಾರ ಕಳೆಯುತ್ತಿದ್ದಂತೆ ಅಲ್ಲಿಯೇ ಬಂದು ಮರುಸ್ಥಾಪನೆಯಾಗುತ್ತಿದ್ದಾರೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸುತ್ತಿದೆ.

ಈ ತಲೆನೋವಿಗೆ ಸಚಿವರ ಪರಿಹಾರ

ಮರಸ್ಥಾಪನೆ ಸಮಸ್ಯೆ ಕುರಿತು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡರಿಗೆ ಎಲ್ಲಾ ಐದು ಪಾಲಿಕೆ ಆಯುಕ್ತರು ಚರ್ಚಿಸಿದರು. ಈ ಸಮಸ್ಯೆಗೆ ಪರಿಹಾರ ತಿಳಿಸಿದ ಸಚಿವರು, ಒಂದು ಬಾರಿ ಮರು ಸ್ಥಾಪನೆಯಾದರೆ ತೆರವುಗೊಳಿಸಿ, 2ನೇ ಬಾರಿಗೆ ಬಂದು ಮರುಸ್ಥಾಪನೆ ಮಾಡಿದರೆ ಆತನಿಗೆ ಅತಿ ಹೆಚ್ಚು ದಂಡವಿಧಿಸಿ ಎಂದು ಸಲಹೆ ನೀಡಿದ್ದಾರೆ. ವ್ಯಾಪಾರಿಗಳು ದಂಡ ಪಾವತಿ ಮಾಡಲು ಪರದಾಡಿದರೆ ಮತ್ತೆ ಆ ಸ್ಥಳದಲ್ಲಿ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನು ಒಪ್ಪಿ ಬಂದಿರುವ ಐದು ಪಾಲಿಕೆಗಳ ಆಯುಕ್ತರು ಮಾರ್ಷಲ್ ಗಳು ಹಾಗೂ ಎಂಜಿನಿಯರ್ ಗಳಿಗೆ ಈ ತಪಾಸಣೆ, ದಂಡ ವಿಧಿಸಿ ತೆರವುಗೊಳಿಸುವ ಕೆಲಸ ಒಪ್ಪಿಸಿದ್ದಾರೆ.

ಸರಣಿ ಅಭಿಯಾನವೂ ವಿಳಂಬಕ್ಕೆ ಕಾರಣ

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಪಶ್ಚಿಮ ಪಾಲಿಕೆ ಆಯುಕ್ತ ಡಾ.ರಾಜೇಂದ್ರ ಕೆ.ವಿ, ಒತ್ತುವರಿ ತೆರವು ಟಾರ್ಗೆಟ್ ಮುಗಿಯದಿರಲು ಸರಣಿ ಅಭಿಯಾನಗಳೂ ಕಾರಣವಾಗಿವೆ. ಜುಲೈನಲ್ಲೇ ಆರಂಭಿಸಲಾದ ಅನಾಥ ವಾಹನಗಳ ತೆರವು, ಇದಾದ ನಂತರ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ, ಮುಖ್ಯಮಂತ್ರಿಗಳು ಘೋಷಿಸಿದ ವಿವಿಧ ಕೆಲಸಗಳಿಗೆ ಕರೆದ ಟೆಂಡರ್ ಪ್ರಕ್ರಿಯೆಯಲ್ಲಿ ಇದೇ ಸಿಬ್ಬಂದಿ ಭಾಗಿಯಾಗಿರುವುದು ತೆರವು ಕಾರ್ಯಾಚರಣೆ ವಿಳಂಬಕ್ಕೆ ಕಾರಣವಾಗಿದೆ. ಆದರೂ ಎರಡು ತಿಂಗಳ ಅವಧಿಯ ಗಡುವು ಮುಗಿಯಲು ಇನ್ನೂ 15 ದಿನಗಳಿವೆ. ಅಷ್ಟರಲ್ಲಿ ನೀಡಿರುವ ಟಾರ್ಗೆಟ್ ಮುಗಿಸುತ್ತೇವೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾವಳಿಯಲ್ಲಿ ಕ್ಷೀಣಿಸುತ್ತಿದೆ ಕಪ್ಪೆಗಳ ಸಂತತಿ!
ಲಭ್ಯತೆ ಆಧರಿಸಿ ತ.ನಾಡಿಗೆ ಕಾವೇರಿ ನೀರು: ಸಿಎಂ