)
ಕನ್ನಡಪ್ರಭ ವಾರ್ತೆ ಬೆಂಗಳೂರು
ಗುರುವಾರ ಜಿಬಿಎ ಕಚೇರಿಯಲ್ಲಿ ಬೀದಿ ಬದಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೂ ಪ್ರಾವಿಜನಲ್ ಟೌನ್ ವೆಂಡಿಂಗ್ ಕಮಿಟಿ ರಚಿಸಿ ಗುರುತಿನ ಚೀಟಿ ವಿತರಿಸಲು ಕ್ರಮಕೈಗೊಳ್ಳಲಾಗುವುದು. ತಮ್ಮ ವಿರುದ್ಧ ಸಭ್ಯತೆಯ ಎಲ್ಲೆ ಮೀರಿ ಕೆಲವರು ಮಾತನಾಡಿದ್ದಾರೆ. ಬೆಂಗಳೂರು ಸುಂದರವಾಗಿಸಲು ಎಲ್ಲ ಟೀಕೆಗಳನ್ನೂ ಸಹಿಸಿಕೊಳ್ಳುತ್ತೇನೆ. ಟೀಕೆ ಮಾಡುತ್ತಾರೆಂದು ಕೆಲಸ ಮಾಡದೇ ಇರಲು ಸಾಧ್ಯವಿಲ್ಲ. ಮುಖ್ಯರಸ್ತೆಗಳಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವು ನಡೆದೇ ನಡೆಯುತ್ತೆ ಎಂದರು.
ಮುಖ್ಯರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಸ್ವಯಂಪ್ರೇರಣೆಯಿಂದ ಬಿಟ್ಟುಕೊಡಲಿ. ಬೆಂಗಳೂರಿನಲ್ಲಿ ಸುಮಾರು 15ರಿಂದ 18 ಸಾವಿರ ಕಿಲೋ ಮೀಟರ್ ರಸ್ತೆಗಳಿವೆ. ಅದರಲ್ಲಿ ಈಗ ಗುರುತು ಮಾಡಿರುವ ಮುಖ್ಯರಸ್ತೆ ಕೇವಲ 1500 ಕಿಲೋ ಮೀಟರ್ ಮಾತ್ರ. ಇಲ್ಲಿಯವರೆಗೆ 430 ಕಿಲೋ ಮೀಟರ್ ತೆರವು ಮಾಡಿದ್ದೇವೆ. ಶೇ 10ರಷ್ಟು ರಸ್ತೆಗಳಲ್ಲಿ ಮಾತ್ರ ಫುಟ್ ಪಾತ್ ಒತ್ತುವರಿ ತೆರವು ಮಾಡುತ್ತಿದ್ದೇವೆ. ಉಳಿದಿರುವ ಶೇ80ರಷ್ಟು ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಮಾಡಲಿ. ಅವರಿಗೂ ಅನ್ಯಾಯ ಆಗದಂತೆ ಗುರುತಿನ ಚೀಟಿ ವಿತರಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸಚಿವರು ಹೇಳಿದರು.ತಾವು ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಇಲ್ಲ. ಈ ಕಾರ್ಯಾಚರಣೆಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಮಾತ್ರ ತೆರವು ಮಾಡುತ್ತಿಲ್ಲ. ಅಂಗಡಿ ಮಾಲೀಕರು ಪಾದಚಾರಿ ಜಾಗ ಒತ್ತುವರಿ ಮಾಡಿದ್ದಾರೆ. ಸುಮಾರು 1581 ಕಡೆಗಳಲ್ಲಿ ಅಂಗಡಿಗಳವರು ಒತ್ತುವರಿ ಮಾಡಿ ತಮ್ಮ ವ್ಯಾಪಾರದ ಸರಕುಗಳನ್ನು ಪಾದಚಾರಿ ಮಾರ್ಗದಲ್ಲಿಟ್ಟು ವ್ಯಾಪಾರ ಮಾಡುತ್ತಿರುವುದನ್ನು ತೆರವು ಮಾಡಲಾಗಿದೆ. 1790 ಕಡೆಗಳಲ್ಲಿ ಅಂಗಡಿಗಳ ಮುಂದೆ ಶೀಟು ಹಾಕಿದ್ದ ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಗಿದೆ. ನಗರದ 2200 ಕಡೆಗಳಲ್ಲಿ ಪಾದಚಾರಿ ಮಾರ್ಗದ ಮೇಲೆ ಹಾಕಿದ್ದ ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಗಿದೆ ಎಂದರು.
ಇಲ್ಲಿಯವರೆಗೆ ಮೂರು ವರ್ಷಗಳಲ್ಲಿ 900ಕ್ಕೂ ಹೆಚ್ಚು ಮಂದಿ ಪಾದಚಾರಿಗಳು ನಗರದಲ್ಲಿ ಮೃತಪಟ್ಟಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಕುಟುಂಬದವರ ಗೋಳನ್ನೂ ನೀವು ನೋಡಬೇಕು. ನನ್ನ ಉದ್ದೇಶ ಅರ್ಥ ಮಾಡಿಕೊಳ್ಳಿ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯರಸ್ತೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸಿ ಎಂಬುದನ್ನು ಹೊರತುಪಡಿಸಿ ಉಳಿದ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಎಲ್ಲ ಏಳು ಬೀದಿ ಬದಿ ವ್ಯಾಪಾರಿ ಸಂಘಟನೆಗಳು ಸಭೆ ಸೇರಿ ಮುಂದಿನ ಹೋರಾಟ ಹೇಗಿರಬೇಕು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಬೀದಿ ಬದಿ ವ್ಯಾಪಾರಿಗಳ ಜಂಟಿ ಕ್ರಿಯಾಸಮಿತಿಯ ವಿನಯ್ ಶ್ರೀನಿವಾಸ್ ತಿಳಿಸಿದರು.
ವಾಹನ ತೆರವು ಆರಂಭ
ಪ್ರಮುಖ ರಸ್ತೆಗಳಲ್ಲಿ ಕೆಟ್ಟು ನಿಂತ ವಾಹನಗಳು, ಅನೇಕ ದಿನಗಳಿಂದ ನಿಲುಗಡೆ ಮಾಡಿರುವ ವಾಹನಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಇಂತಹ ವಾಹನಗಳ ತೆರವಿಗೆ ದಕ್ಷಿಣ ಪಾಲಿಕೆ ವಿಭಾಗ, ಪಶ್ಚಿಮ ವಿಭಾಗಗಳಲ್ಲಿ ಟೋಯಿಂಗ್ ವಾಹನಗಳನ್ನು ಸಿದ್ಧಪಡಿಸಿದೆ. ಅಲ್ಲದೇ ಈ ರೀತಿ ತೆರವು ಮಾಡಿದ ವಾಹನಗಳನ್ನು ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡಲು ಜಾಗಗಳನ್ನು ಗುರುತಿಸಲಾಗಿದೆ.