ಕನ್ನಡ ಪ್ರಭ ವಾರ್ತೆ ಬೆಂಗಳೂರು

ನಗರದ ಐದು ವಿಭಾಗಗಳಲ್ಲಿ ಗುರುವಾರ ಪಾದಚಾರಿ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಒಟ್ಟು 25 ಕಿಲೋ ಮೀಟರ್ ಪಾದಚಾರಿ ಮಾರ್ಗದಲ್ಲಿ ಒತ್ತುವರಿ ತೆರವು ಮಾಡಲಾಗಿದೆ.

ಉತ್ತರ ಪಾಲಿಕೆಯಲ್ಲಿ 4.80 ಕಿ.ಮೀ. ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಲಾಗಿದೆ. ಪುಲಿಕೇಶಿನಗರ ವಿಭಾಗದಲ್ಲಿ ಎಸ್.ಕೆ.ಗಾರ್ಡನ್ ಮುಖ್ಯರಸ್ತೆಯಲ್ಲಿ ಅನ್ನೈ ವೇಲಾಂಕಣ್ಣಿ ಚರ್ಚ್‌ನಿಂದ ಐಬಿ ಲೇಔಟ್‌. ಸರ್ವಜ್ಞನಗರ ವಿಭಾಗದಲ್ಲಿ ನರೇಂದ್ರ ಟೆಂಟ್ ರಸ್ತೆಯಲ್ಲಿ ಬಿಎಸ್‌ಎನ್‌ಎಲ್ ಕಚೇರಿಯಿಂದ ನಾಗವಾರ ಮುಖ್ಯರಸ್ತೆ ವರೆಗೆ ಸುಮಾರು ಒಂದು ಕಿಲೋ ಮೀಟರ್ ರಸ್ತೆ ಒತ್ತುವರಿ ತೆರವು ಮಾಡಲಾಗಿದೆ.

ಯಲಹಂಕ ವಿಭಾಗದಲ್ಲಿ ಸರ್ಕಾರಿ ರಸ್ತೆ (ಬಿಎಸ್‌ಎಫ್ ಇಂದ ಬೆಳ್ಳಗೆರೆವರೆಗೆ), ಸಾನಿ ರಸ್ತೆ ಹಾಗೂ ಅಟ್ಟೂರು ವ್ಯಾಪ್ತಿಯಲ್ಲಿ ಸುಮಾರು ಒಂದು ಕಿ.ಮೀ, ಹೆಬ್ಬಾಳ ವಿಭಾಗದಲ್ಲಿ ಮುನಿರೆಡ್ಡಿಪಾಳ್ಯ ಮುಖ್ಯರಸ್ತೆಯಲ್ಲಿ ಸುಮಾರು 1.50 ಕಿ.ಮೀ, ದಾಸರಹಳ್ಳಿ ವಿಭಾಗದಲ್ಲಿ ಎಂ.ಇ.ಐ. ಲೇಔಟ್ ಮುಖ್ಯರಸ್ತೆಯಲ್ಲಿ 0.80 ಕಿ.ಮೀ ಒತ್ತುವರಿ ತೆರವುಗೊಳಿಸಲಾಗಿದೆ.

ದಕ್ಷಿಣದಲ್ಲಿ 7.95 ಕಿ.ಮೀ ತೆರವು:


ದಕ್ಷಿಣ ಪಾಲಿಕೆ ವಿಭಾಗದಲ್ಲಿ ಗುರುವಾರ 7.95 ಕಿ.ಮೀ ಉದ್ದದ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಲಾಗಿದೆ. ಅಂಜನಾಪುರ ಮತ್ತು ಬೇಗೂರು ವಿಭಾಗದಲ್ಲಿ, ಸಾರಕ್ಕಿ ಸಿಗ್ನಲ್‌ನಿಂದ ಪೈಪ್‌ಲೈನ್ ರಸ್ತೆ ಹಾಗೂ ಇಲ್ಯಾಸ್ ನಗರ ಮುಖ್ಯ ರಸ್ತೆವರೆಗಿನ ಹೊರವರ್ತುಲ ರಸ್ತೆಯಲ್ಲಿ 1.40 ಕಿ.ಮೀ., ಹೊಸೂರು ಮುಖ್ಯ ರಸ್ತೆಯಿಂದ ನೈಸ್ ರಸ್ತೆ ಸೇತುವೆವರೆಗಿನ ಬಾಸಾಪುರ ಮುಖ್ಯ ರಸ್ತೆಯಲ್ಲಿ 1.50 ಕಿ.ಮೀ. ಹಾಗೂ ಗ್ರೀನ್ ವ್ಯಾಲಿ ಶಾಲೆಯಿಂದ ಹರಿನಗರ ಕ್ರಾಸ್‌ವರೆಗಿನ ಚುಂಚಘಟ್ಟ ಮುಖ್ಯ ರಸ್ತೆಯಲ್ಲಿ 2.10 ಕಿ.ಮೀ. ಸೇರಿ ಒಟ್ಟು 5.00 ಕಿ.ಮೀ. ಪಾದಚಾರಿ ರಸ್ತೆ ಒತ್ತುವರಿ ಮುಕ್ತಗೊಳಿಸಲಾಗಿದೆ.

ಪಶ್ಚಿಮದಲ್ಲಿ 3.6 ಕಿ.ಮೀ. ಒತ್ತುವರಿ ತೆರವು:

ರಾಜಾಜಿನಗರ ವಿಭಾಗದಲ್ಲಿ ಪ್ರಕಾಶನಗರದ ಅಯ್ಯಪ್ಪಸ್ವಾಮಿ ದೇವಸ್ಥಾನ ಮುಖ್ಯರಸ್ತೆ, ಡಾ. ರಾಜಕುಮಾರ್‌ ರಸ್ತೆ 3ನೇ ಮುಖ್ಯರಸ್ತೆಯಲ್ಲಿ 0.70 ಕಿ.ಮೀ., ಬಸವನಗುಡಿ ವಿಭಾಗದಲ್ಲಿ ನಾಗಸಂದ್ರ ಮುಖ್ಯ ರಸ್ತೆ, ಸುಬ್ಬಾರಾಮ್‌ ಚೆಟ್ಟಿ ರಸ್ತೆ, ಸೌತ್‌ ಎಂಡ್ ರಸ್ತೆ 0.‌8 ಕಿ.ಮೀ, ಹೊಸಕೆರೆಹಳ್ಳಿ ಅಡ್ಡರಸ್ತೆ, 80 ಫೀಟ್‌ ಮುಖ್ಯ ರಸ್ತೆ, ಶ್ರೀವಿದ್ಯಾನಗರ ಬಸ್‌ ಸ್ಟಾಪ್‌ ವರೆಗೆ 1.2 ಕಿ.ಮೀ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದೆ.

ಯಡಿಯೂರು ಉಪ ವಿಭಾಗದ ಕರಿಯಪ್ಪ ರಸ್ತೆ, ಸೌತ್‌ ಎಂಡ್‌ ರಸ್ತೆ- ದಿವಾನ್‌ ಮಾಧವನ್‌ ರಸ್ತೆ 0.3 ಕಿ.ಮೀ. ಗಣೇಶಮಂದಿರ ಉಪ ವಿಭಾಗದಲ್ಲಿ ಸುಬ್ರಹ್ಮಣ್ಯಪುರ ರಸ್ತೆ, 9ನೇ ಮುಖ್ಯ ರಸ್ತೆ, ಹುಣಸೇಮರ ಸಿಗ್ನಲ್ 0.3 ಕಿ.ಮೀ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದೆ. ಗೋವಿಂದರಾಜನಗರ ವಿಭಾಗದ, ರಾಜಾಜಿನಗರ ವೃತ್ತ, ಪ್ರಸನ್ನ ಥಿಯೇಟರ್‌ ಜಂಕ್ಷನ್‌ ಬಳಿ ಒತ್ತುವರಿ ತೆರವುಗೊಳಿಸಲಾಗಿದೆ.

ಪೂರ್ವದಲ್ಲಿ 9.4 ಕಿಲೋಮೀಟರ್ ತೆರವು:

ಮಹದೇವಪುರ ವಲಯ ಹಾಗೂ ಕೆ.ಆರ್.ಪುರ ವಲಯಗಳಲ್ಲಿ ಒಟ್ಟು 9.4 ಕಿಲೋ ಮೀಟರ್ ಪಾದಚಾರಿ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದೆ. 42 ತಳ್ಳುಗಾಡಿ, 57 ಪೆಟ್ಟಿ ಅಂಗಡಿ, 66 ಮೆಟ್ಟಿಲು, 166 ಜಾಹಿರಾತು ಫಲಕಗಳು, 113 ಶೀಟ್ ತೆರವುಗೊಳಿಸಲಾಗಿದೆ.