ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನನ್ನ ಹೆಸರು ಹಿಡಿದು ಸಲ್ಲದ ಆರೋಪ ಮಾಡುತ್ತಿರುತ್ತಾರೆ. ತಾವು ಅದಕ್ಕೆಲ್ಲ ತಲೆ ಕೆಡೆಸಿಕೊಳ್ಳೋದಿಲ್ಲವೆಂದರು.
ಈಚೆಗೆ ಕಲಬುರಗಿಯಲ್ಲಿ ನಡೆದ ನಮೋ ಬ್ರಿಗೆಡ್‌ನ ಸಮಾರಂಭಕ್ಕೆ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಅವರಿಗೆ ಜಿಲ್ಲೆ ಪ್ರವೇಶ ನಿರಾಕರಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುವಾಗ ಸಿಡಿಮಿಡಿಗೊಂಡ ಸಚಿವರು, ನನಗೆ ಮಾಡಲು ಬಹಳಷ್ಟು ಕೆಲಸಗಳಿವೆ ಬಾಡಿಗೆ ಭಾಷಣಕಾರನ ಬಗ್ಗೆ ಮಾತನಾಡಲು ಸಮಯವಿಲ್ಲ. ಅವನು ಒಂದೇ ಒಂದು ಗ್ರಾಪಂ ಚುನಾವಣೆ ಗೆದ್ದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.ಸಂವಿಧಾನ ಬದಲಿಸುವ ಬಗ್ಗೆ ಮಾತನಾಡಿರುವ ಸಂಸದ ಅನಂತಕುಮಾರ ಅವರಿಗೆ ತಲೆ ಕೆಟ್ಟಿದೆ, ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆಂದರು. ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೇಟ್ ಸಿಗೋದು ಅನುಮಾನವೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯಲ್ಲಿ ಯಾರಿಗೆ ಟಿಕೇಟ್ ನೀಡುತ್ತಾರೆ, ನಿರಾಕರಿಸುತ್ತಾರೆಂಬುದು ತಮಗೆ ಸಂಬಂಧವೇ ಇಲ್ಲವೆಂದರು.ಸಂಸದರ ಅಪರಂಜಿ ಎಲ್ಲಿ?: ಚಿತ್ತಾಪುರದ ಅಪರಂಜಿ ಈಗ ಎಲ್ಲಿ ಎಂದು ಜಾಧವ್ ರನ್ನು ಪ್ರಶ್ನಿಸಿದ ಸಚಿವರು, ಅಪಘಾತವನ್ನು ಹಲ್ಲೆ ಎಂದು ಬಿಂಬಿಸಲಾಗಿತ್ತು. ಪೊಲೀಸ್ ತನಿಖೆ ನಂತರ ಅದು ಸುಳ್ಳು ಎಂದು ಸಾಬೀತಾಗಿತ್ತು. ಆ ನಂತರ ಜಾಧವ್‌ರ ಅಪರಂಜಿ ನಾಪತ್ತೆಯಾಗಿದ್ದಾನೆ ಎಂದು ಕುಟುಕಿದರು.