ಕನ್ನಡಪ್ರಭ ವಾರ್ತೆ ಕೊಪ್ಪ
ಸೌಹಾರ್ದ ಸಹಕಾರ ಸಂಘಗಳಿಗೆ ಲಾಭಕ್ಕಿಂತ ಸೇವೆಯೇ ಮುಖ್ಯವಾಗುತ್ತದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ ತಿಳಿಸಿದರು.ಬುಧವಾರ ಕೊಪ್ಪದಲ್ಲಿ ಯಡಗೆರೆ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರಕ್ಕೂ ಮುಂನ್ನವೇ ಸಹಕಾರಿ ಚಳುವಳಿ ಹುಟ್ಟಿದೆ. ಒಬ್ಬ ವ್ಯಕ್ತಿ ಮಾಡುವ ಕೆಲಸವನ್ನು ಸಹಕಾರದ ತತ್ವದಡಿ ಸಂಘಟಿತರಾಗಿ ಕೆಲಸ ಮಾಡಲಾಗುತ್ತದೆ. ಯಡಗೆರೆ ಸೌಹಾರ್ದ ಸಹಕಾರ ಸಂಘ 20 ವರ್ಷಗಳಲ್ಲಿ ಅದ್ಭುತವಾಗಿ ಬೆಳೆದಿದೆ. ಸೌಹಾರ್ದ ಕಾಯ್ದೆ ಬಂದ ಮೇಲೆ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟರು.
ಆದರೆ ರಾಜ್ಯದ ಕೆಲವು ಸಹಕಾರ ಸಂಘಗಳು ಸ್ವಾತಂತ್ರ ದುರುಪಯೋಗ ಪಡಿಸಿಕೊಂಡಿವೆ. 2010ರಲ್ಲಿ ಸೌಹಾರ್ದ ಕಾಯ್ದೆ ಬಂದ ನಂತರ ರಾಜ್ಯದಲ್ಲಿ 6300 ಸಹಕಾರ ಸಂಸ್ಥೆಗಳು ನೋಂದಾಯಿಸಿಕೊಂಡಿವೆ. ಸೌಹಾರ್ದ ಸಹಕಾರಿಯಲ್ಲಿ ಆರ್ಥಿಕ ಸ್ವಾತಂತ್ರ ಸಿಕ್ಕಿದೆ. ಸೌಹಾರ್ದ ಸಹಕಾರ ಸಂಘಗಳಲ್ಲಿ ಸರ್ಕಾರದ ಪಾಲು ಏನು ಇಲ್ಲ. ಆದರೆ, ಕೆಲವು ಬಾರಿ ಸರ್ಕಾರ ಸಹಕಾರ ಸಂಸ್ಥೆಗೆ ಮೂಗುದಾರ ಹಾಕಲು ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಉಪಾಧ್ಯಕ್ಷ ಎ.ಆರ್. ಪ್ರಸನ್ನ ಕುಮಾರ್, ಯಸ್ಕಾನ್ ಹಾರ್ಡ್ ವೇರ್ ಉದ್ಘಾಟಿಸಿ ಮಾತನಾಡಿ, ಸಂಯಕ್ತ ಸಹಕಾರಿ ಮೈಸೂರು ವಿಭಾಗದ ಪೈಕಿ ಕೊಪ್ಪದ ಯಡಗೆರೆ ಸೌಹಾರ್ದ ಕೋ ಆಪರೇಟೀವ್ ಸೊಸೈಟಿ 3 ನೇ ಸ್ಥಾನದಲ್ಲಿದೆ. 160 ಸದಸ್ಯರಿಂದ ಪ್ರಾರಂಭಗೊಂಡ ಯಡಗೆರೆ ಸೊಸೈಟಿ ಈಗ 113 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದರೆ ಸಣ್ಣ ವಿಚಾರವಲ್ಲ ಎಂದರು.
ಸಮಾಜದ ಎಲ್ಲರ ಸಹಕಾರ ಪಡೆದು ಪರಿಶ್ರಮದಿಂದ ಸಂಘ ಬೆಳೆಸಲಾಗಿದೆ. ಯಡಗೆರೆ ಸೊಸೈಟಿ ಅಧ್ಯಕ್ಷರಾದ ಯಡಗೆರೆ ಸುಬ್ರಮಣ್ಯ ಕಳೆದ 25 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಶ್ರಮ ವಹಿಸಿ ದುಡಿದಿದ್ದಾರೆ. ಯುವಕರು ಹೆಚ್ಚಾಗಿ ಸಹಕಾರ ಕ್ಷೇತ್ರಕ್ಕೆ ಬರಬೇಕು ಎಂದು ಕರೆ ನೀಡಿದರು.ಸಭೆ ಅಧ್ಯಕ್ಷತೆವಹಿಸಿದ್ದ ಯಡಗೆರೆ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಯಡಗೆರೆ ಸುಬ್ರಮಣ್ಯ ಮಾತನಾಡಿ, 2004 ರಲ್ಲಿ 170 ಸದಸ್ಯರೊಂದಿಗೆ ಯಡಗೆರೆ ಸೊಸೈಟಿ ಹುಟ್ಟು ಹಾಕಿದ್ದೆವು. ₹16 ಲಕ್ಷ ಬಂಡವಾಳದಿಂದ ಪ್ರಾರಂಭಿಸ ಲಾಗಿತ್ತು. ಈ ವರೆಗೆ 42 ಮಂದಿ ನಿರ್ದೇಶಕರು ಕರ್ತವ್ಯ ನಿರ್ವಹಿಸಿದ್ದು, ಮೊದಲು 3 ತಾಲೂಕಿಗೆ ಸೀಮಿತವಾಗಿದ್ದ ಯಡಗೆರೆ ಸೊಸೈಟಿ ನಂತರ 2 ಜಿಲ್ಲಾ ವ್ಯಾಪ್ತಿಗೆ ವಿಸ್ತರಣೆಯಾಯಿತು. 2008ರಿಂದ ರಾಜ್ಯ ವ್ಯಾಪ್ತಿಗೆ ವಿಸ್ತರಿಸಿದೆವು ಎಂದು ತಿಳಿಸಿದರು.
2010ರಲ್ಲಿ ಯಸ್ಕಾನ್ ಫೌಂಡೇಷನ್ ಪ್ರಾರಂಭಿಸಲಾಯಿತು. ಯಡಗೆರೆ ಸೊಸೈಟಿ ನ.ರಾ.ಪುರ, ಕಳಸ , ಕುದುರೆಗುಂಡಿಯಲ್ಲಿ ಶಾಖೆ ಹೊಂದಿದೆ. 24 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕೊಪ್ಪದಲ್ಲಿ ನೂತನ ಕಟ್ಟಡ ಸೇರಿ 2 ಸ್ವಂತ ಕಟ್ಟಡ, ನ.ರಾ.ಪುರದಲ್ಲಿ ಸ್ವಂತ ಕಟ್ಟಡ ಹಾಗೂ 1 ಎಕರೆ ಜಾಗ ಹೊಂದಿದ್ದೇವೆ. ಎಲ್ಲಾ ಸೇರಿ ₹22 ಕೋಟಿ ಆಸ್ತಿಯಾಗಿದೆ. ಪ್ರಸ್ತುತ ನಮ್ಮ ಸಂಸ್ಥೆಯಲ್ಲಿ 8021 ಸದಸ್ಯರಿದ್ದಾರೆ. ₹5.38 ಕೋಟಿ ಷೇರು ಹಣ ಇದೆ. ₹93ಕೋಟಿ ರು. ಠೇವಣಿ ಇದೆ. ₹29.77 ಕೋಟಿ ವಿವಿಧ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಿದ್ದು, ₹113 ಕೋಟಿ ದುಡಿಯುವ ಬಂಡವಾಳ ಇದೆ. ಪ್ರಸಕ್ತ ಸಾಲಿನಲ್ಲಿ ₹1.18 ಕೋಟಿ ಲಾಭ ಗಳಿಸಿದ್ದೇವೆ ಎಂದರು.ಸಾಗರ ಲೆಕ್ಕ ಪರಿಶೋಧಕ ಬಿ.ವಿ. ರವೀಂದ್ರನಾಥ್ ಕಚೇರಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕಾನೂನು ಸಲಹೆಗಾರ ಜಿ.ಎಂ. ವಿಶ್ವನಾಥ್, ಯಡಗೆರೆ ಸೌಹಾರ್ದ ಕೋ ಆಪರೇಟೀವ್ ಸೊಸೈಟಿಯ ಉಪಾಧ್ಯಕ್ಷ ಎಲ್.ಡಿ. ನವೀನ್, ನಿರ್ದೇಶಕರಾದ ವೈ.ಎಸ್. ಕೃಷ್ಣಮೂರ್ತಿ, ಕೆ.ಎಸ್.ಸುಬ್ರಮಣ್ಯ, ಜಿ.ಎಸ್.ಮಹಾಬಲ, ಅಣ್ಣಪ್ಪ, ರಾಮಣ್ಣ ಭಂಡಾರಿ, ಕೃಷ್ಣಾನಂದ ಶೇಟ್, ಬಿ.ಪಿ. ಸದಾನಂದ, ಜಿ.ಎಸ್. ನಟರಾಜ, ಎಚ್.ಎ. ಕೃಷ್ಣಮೂರ್ತಿ, ಎಚ್.ಕೆ. ಭಾಸ್ಕರ್, ಎಸ್. ಉಪೇಂದ್ರರಾವ್, ಗೀತ ಸುದರ್ಶನ್, ಗಾಯಿತ್ರಿ ಗಣೇಶ್, ಸುಧಾಕರ, ವಸಂತಿ, ಎಸ್.ಎಸ್. ಶೇಷಗಿರಿ, ವೈ.ಎಸ್. ಸತ್ಯನಾರಾಯಣ, ಯಸ್ಕಾನ್ ಫೌಂಡೇಷನ್ ಉಪಾಧ್ಯಕ್ಷ ವೈ.ಎಸ್. ರಾಮಚಂದ್ರ, ಯಸ್ಕಾನ್ ಫೌಂಡೇಷನ್ ನಿರ್ದೇಶಕರಾದ ಬಿ.ಕೆ. ರಮೇಶರಾವ್, ಬಿ.ವಿ. ಶ್ಯಾಮಸುಂದರ್, ಯಡಗೆರೆ ಸೌಹಾರ್ದ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಶರ್ಮ ಇದ್ದರು.