ಮೊದಲ ಬಾರಿ ರಾಜ್ಯದಿಂದ 3 ಸ್ತ್ರೀ ಸಂಸದರು!

KannadaprabhaNewsNetwork | Updated : Jun 08 2024, 12:04 PM IST

ಸಾರಾಂಶ

ಇದೇ ಮೊದಲ ಬಾರಿಗೆ ಕರ್ನಾಟಕದಿಂದ ಮೂವರು ಮಹಿಳೆಯರು ಏಕಕಾಲಕ್ಕೆ ಲೋಕಸಭೆ ಪ್ರವೇಶಿಸುತ್ತಿದ್ದಾರೆ

ಪ್ರಭುಸ್ವಾಮಿ ನಟೇಕರ್‌

 ಬೆಂಗಳೂರು :   ಇದೇ ಮೊದಲ ಬಾರಿಗೆ ಕರ್ನಾಟಕದಿಂದ ಮೂವರು ಮಹಿಳೆಯರು ಏಕಕಾಲಕ್ಕೆ ಲೋಕಸಭೆ ಪ್ರವೇಶಿಸುತ್ತಿದ್ದಾರೆ. 1952ರಿಂದ ಈವರೆಗೆ 18 ಲೋಕಸಭೆ ಚುನಾವಣೆಗಳು ನಡೆದಿದ್ದು, ರಾಜ್ಯದಿಂದ ಈವರೆಗೆ ಎರಡು ಬಾರಿ ಮಾತ್ರ ಏಕಕಾಲದಲ್ಲಿ ಇಬ್ಬರು ಮಹಿಳೆಯರು ಲೋಕಸಭೆ ಪ್ರವೇಶಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಮೂವರು ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಚಿಕ್ಕೋಡಿ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ, ದಾವಣಗೆರೆ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್‌ ಮತ್ತು ಬೆಂಗಳೂರು ಉತ್ತರ ಕ್ಷೇತ್ರದಿಂದ ಜಯಗಳಿಸಿರುವ ಬಿಜೆಪಿ ಶೋಭಾ ಕರಂದ್ಲಾಜೆ ಅವರು ಸಂಸತ್‌ಗೆ ಪ್ರವೇಶಿಸಲು ಸಜ್ಜಾಗಿದ್ದಾರೆ.

1999ರ ಲೋಕಸಭೆ ಚುನಾಣೆಯಲ್ಲಿ ರಾಜ್ಯದಿಂದ ಇಬ್ಬರು ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಹಾಗೂ ಮಾರ್ಗರೇಟ್ ಆಳ್ವ ಅವರು ಕೆನರಾ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ರಾಜ್ಯವನ್ನು ಪ್ರತಿನಿಧಿಸಿದ್ದರು. ನಂತರ 2019ರಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಮತ್ತು ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್‌ ಗೆಲುವು ಸಾಧಿಸಿದ್ದರು. ಇದನ್ನು ಹೊರತುಪಡಿಸಿದರೆ ಇತರೆ ಚುನಾವಣೆಯಲ್ಲಿ ಕೇವಲ ಒಬ್ಬರು ಮಹಿಳೆಯರು ಮಾತ್ರ ಆಯ್ಕೆಯಾಗಿದ್ದಾರೆ.

ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಸಂಸತ್‌ನ ಉಭಯ ಸದನಗಳಲ್ಲಿ ಅಂಗೀಕಾರ ಮಾಡಲಾಗಿದೆ. 2029ರ ಲೋಕಸಭೆ ಚುನಾವಣೆಗೆ ಮಹಿಳಾ ಮೀಸಲಾತಿ ರಾಷ್ಟ್ರಾದ್ಯಂತ ಅನ್ವಯವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ನಿರೀಕ್ಷೆ ಇದೆ.

ರಾಜ್ಯದಿಂದ ಈವರೆಗೆ 18 ಮಹಿಳಾ ಸಂಸದರು ಆಯ್ಕೆ

ದೇಶದ ಇತಿಹಾಸದಲ್ಲಿ ರಾಜ್ಯದಿಂದ ಒಟ್ಟು 18 ಮಹಿಳಾ ಸಂಸದರು ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಈ ಪೈಕಿ 15 ಮಹಿಳಾ ಸಂಸದರು ಪೂರ್ಣಾವಧಿಗೆ ಆಯ್ಕೆಯಾದರೆ, ಮೂವರು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ.

ಮೊಟ್ಟ ಮೊದಲ ಸಂಸದೆಯಾದ ಸರೋಜಿನಿ ಬಿಂದುರಾವ್ ಮಹಿಷಿ ಅವರು ಧಾರವಾಡ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ನಂತರ ಬಸವರಾಜೇಶ್ವರಿ ಬಳ್ಳಾರಿಯಿಂದ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಕಾಂಗ್ರೆಸ್‌ನಿಂದ ಡಿ.ಕೆ. ತಾರಾದೇವಿ ಚಿಕ್ಕಮಗಳೂರು ಕ್ಷೇತ್ರದಿಂದ, ಚಂದ್ರಪ್ರಭಾ ಅರಸ್ ಮೈಸೂರಿನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ, ರತ್ಮಮಾಲಾ ಧಾರೇಶ್ವರ್ ಸವಣೂರು ಅವರು ಚಿಕ್ಕೋಡಿಯಿಂದ ಜೆಡಿಯುನಿಂದ ಆಯ್ಕೆಯಾಗಿದ್ದರು. ಸೋನಿಯಾ ಗಾಂಧಿ ಬಳ್ಳಾರಿಯಿಂದ, ಮಾರ್ಗರೇಟ್ ಆಳ್ವಾ ಕೆನರಾ (ಉತ್ತರ ಕನ್ನಡ) ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ, ತೇಜಸ್ವಿನಿ ರಮೇಶ್ ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಜಯಗಳಿಸಿದ್ದರು. ಮನೋರಮಾ ಮಧ್ವರಾಜ್ ಉಡುಪಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ, ಜೆ.ಶಾಂತಾ ಬಳ್ಳಾರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ, ಶೋಭಾ ಕರಂದ್ಲಾಜೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ, ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರದಿಂದ ಪಕ್ಷೇತರವಾಗಿ ಗೆಲುವು ಸಾಧಿಸಿದ್ದರು. ಈಗ ಪ್ರಿಯಾಂಕಾ ಜಾರಕಿಹೊಳಿ, ಪ್ರಭಾ ಮಲ್ಲಿಕಾರ್ಜುನ್‌ ಮತ್ತು ಶೋಭಾ ಕರಂದ್ಲಾಜೆ ಜಯಗಳಿಸಿದ್ದಾರೆ.

ಇನ್ನು, ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟಿ ರಮ್ಯಾ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತು ಮಂಗಳಾ ಅಂಗಡಿ ಬೆಳಗಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

Share this article