ಗದಗ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಗರೀಬಿ ಹಟಾವೊ ಮೂಲಕ ಬಡತನ ನಿರ್ಮೂಲನೆ ಯೋಜನೆ ಘೋಷಣೆ ಮಾಡಿದರು. ಅದನ್ನೇ ರಾಜೀವ ಗಾಂಧಿ ಹೇಳುತ್ತಾ ಬಂದರು. ಈಗ ರಾಹುಲ್ ಗಾಂಧಿ ಸಹ ಅದನ್ನೇ ಹೇಳುತ್ತಿದ್ದು, ಮೂರು ತಲೆಮಾರಿನಿಂದ ಬಡವರ ಏಳ್ಗೆ ಆಗಲಿಲ್ಲ ಅವರ ಕುಟುಂಬ ಮಾತ್ರ ಶ್ರೀಮಂತವಾಗುತ್ತಾ ಬಂದಿದೆ ಎಂದು ಬಿಜೆಪಿ ಯುವ ನಾಯಕಿ, ಖ್ಯಾತ ಚಿತ್ರ ನಟಿ ಶೃತಿ ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ಪ್ರಮುಖ ಬೀದಿಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಬೃಹತ್ ರೋಡ್ ಶೋ ಮೂಲಕ ಮತಯಾಚಿಸಿ, ಮಾತನಾಡಿದ ಅವರು, ಕಳೆದ ೬೫ ವರ್ಷ ಆಳಿದ ಕಾಂಗ್ರೆಸ್ ಸರ್ಕಾರ ಗರೀಬಿ ಹಟಾವೋ ಘೋಷಣೆ ಮಾಡುತ್ತಾ ಬಡವರ, ದಲಿತರ ಮತಗಳನ್ನು ಪಡೆಯುತ್ತಾ ಅಧಿಕಾರ ಮಾಡಿ ಈ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ ಎಂದರು.ಕಳೆದ ೧೦ವರ್ಷಗಳ ಕಾಲ ಆಡಳಿತ ನಡೆಸಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ೨೫ ಕೋಟಿ ಬಡ ಕುಟುಂಬಗಳ ಆಶಾಕಿರಣವಾಗಿದ್ದು, ಪ್ರಪಂಚದಲ್ಲಿಯೇ ಶುದ್ಧ ಹಸ್ತ ಪ್ರಧಾನಿಯಾಗಿದ್ದಾರೆ ಎಂದರು.
ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಿಟ್ಟಿ ಭಾಗ್ಯ ನೀಡುವ ಮೂಲಕ ಜನರನ್ನು ಆಲಸಿಗಳನ್ನಾಗಿ ಮಾಡುತ್ತಿದೆ. ಆದರೆ ಮೋದಿ ಸರ್ಕಾರ ವ್ಯಕ್ತಿತ್ವ ರೂಪಿಸುವ ಲಕ್‌ಪತಿ ದೀದೀ ಯೋಜನೆ ಮೂಲಕ ಮಹಿಳೆಯರನ್ನು ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹ ನೀಡುತ್ತಿದೆ ಎಂದರು.ಮಾರುತಿ ನಗರದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಶಾಸಕ ಸಿ.ಸಿ. ಪಾಟೀಲ ಅವರೊಂದಿಗೆ ಚಿತ್ರ ನಟಿ ಶೃತಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಈ ವೇಳೆ ಬಿಜೆಪಿ ಮುಖಂಡ ಡಾ. ಶೇಖರ ಸಜ್ಜನ, ಯುವ ಮುಖಂಡ ಉಮೇಶಗೌಡ ಪಾಟೀಲ ಸೇರಿದಂತೆ ಪಕ್ಷದ ಮುಖಂಡರು, ಮಹಿಳೆಯರು ಇದ್ದರು. ಮಾಜಿ ಸೈನಿಕ, ಬಿಜೆಪಿ ಧುರೀಣ ದತ್ತಾತ್ರೇಯ ಜೋಶಿ ಸ್ವಾಗತಿಸಿ ವಂದಿಸಿದರು.