ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಎಪಿಎಂಸಿ ಕಾರ್ಯದರ್ಶಿ ರಫಿಕ್ ಅಹಮದ್ ಅವರನ್ನು ಭೇಟಿ ಮಾಡಿದ ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಸಮುದಾಯಕ್ಕೆ ವರ್ತಕರಿಂದ ಆಗುತ್ತಿರುವ ಕಿರುಕುಳವನ್ನು ಪ್ರಸ್ತಾಪಿಸಿ ಕಿರುಕುಳ ನಿಲ್ಲದಿದ್ದರೆ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದರು.
ಎಪಿಎಂಸಿ ಆವರಣದಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ ವಾರದ ಸಂತೆ ನಡೆಯುತ್ತದೆ. ಸಂತೆ ವ್ಯಾಪಾರಿಗಳ್ಯಾರೂ ಎಪಿಎಂಸಿ ಗೆ ತೆರಿಗೆ ಕಟ್ಟುತ್ತಿಲ್ಲ. ಸಂತೆಯಲ್ಲಿ ಮಾರಾಟಕ್ಕಾಗಿ ರೈತರು ಮುಂಜಾನೆ 5 ಗಂಗೆ ತಾವು ಬೆಳೆದ ಸೊಪ್ಪು, ತರಕಾರಿ, ಕಾಳು ಕಡ್ಡಿಗಳನ್ನು ಮಾರಾಟಕ್ಕೆ ತರುತ್ತಾರೆ.ರೈತರು ಮಾರಾಟಕ್ಕಾಗಿ ತಂದಿಟ್ಟ ಜಾಗವನ್ನು ಖಾಲಿ ಮಾಡುವಂತೆ ಸಂತೆ ವ್ಯಾಪಾರಿಗಳು ಮತ್ತು ದಳ್ಳಾಳಿಗಳು ಬೆದರಿಕೆ ಹಾಕುತ್ತಿದ್ದಾರೆ. ಇಲ್ಲಿ ಮಾರಾಟ ಮಾಡುವ ಅಧಿಕಾರ ರೈತರಿಗೆ ಮಾತ್ರ ಇದೆ. ಮಾರಾಟ ಮಾಡಲು ಬಂದ ರೈತರನ್ನು ಒಕ್ಕಲೆಬ್ಬಿಸಿ ಅದೇ ಜಾಗದಲ್ಲಿ ವ್ಯಾಪಾರ ಮಾಡುವ ಹಕ್ಕು ವರ್ತಕರಿಗಿಲ್ಲ ಎಂದು ಕಿಡಿಕಾರಿದರು.
ಎಳನೀರು ಕೊಂಡುಕೊಳ್ಳುವ ವರ್ತಕರಿಂದ ರೈತರಿಗೆ ಭಾರೀ ಪ್ರಮಾಣದ ಅನ್ಯಾಯವಾಗುತ್ತಿದೆ. ಬಿಡಿ ಲೆಕ್ಕದಲ್ಲಿ ವರ್ತಕರು ರೈತರಿಂದ ಎಳನೀರು ಖರೀದಿಸುತ್ತಿದ್ದು ಪ್ರತಿ 100 ಎಳನೀರಿಗೆ 6 ಎಳನೀರನ್ನು ಸೋಡಿ (ಕೇಡು ಲೆಕ್ಕ) ಹೆಸರಿನಲ್ಲಿ ರೈತರಿಂದ ಉಚಿತವಾಗಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಳನೀರು ಮತ್ತು ಕಾಯಿ ಮಾರಾಟದಲ್ಲಿ ಕೆಡು ಕಳೆಯುವ ನಿಯಮ ಇಲ್ಲ. ಕೇಡು ಕಳೆಯುವ ಲೆಕ್ಕದಲ್ಲಿ ರೈತರಿಂದ ಉಚಿತವಾಗಿ ಹೆಚ್ಚುವರಿ ಎಳನೀರು ಮತ್ತು ತೆಂಗಿನ ಕಾಯಿ ಪಡೆಯುತ್ತಿರುವ ವರ್ತಕರ ವಿರುದ್ಧ ಕ್ರಮ ಜರುಗಿಸಬೇಕು. ಬಿಡಿ ಎಳನೀರು ಮಾರಾಟ ದಂಧೆಯನ್ನು ನಿಲ್ಲಿಸಿ ಎಳನೀರನ್ನು ಕೆ.ಜಿ.ಲೆಕ್ಕದಲ್ಲಿ ತೂಕ ಹಾಕಿ ಕೊಂಡುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ದಳ್ಳಾಳಿಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ತೂಕದ ಲೆಕ್ಕದಲ್ಲಿ ಎಳನೀರು ಮಾರಾಟಕ್ಕೆ ಅನುವು ಮಾಡುವ ಮತ್ತು ಎಳನೀರು ಮತ್ತು ತೆಂಗಿನ ಕಾಯಿ ಮಾರಾಟದ ವೇಳೆ ಕೇಡಿನ ಲೆಕ್ಕದಲ್ಲಿ ರೈತರಿಂದ ಉಚಿತವಾಗಿ ಪಡೆಯುವುದನ್ನು ತಪ್ಪಿಸಲು ಶೀಘ್ರದಲ್ಲಿಯೇ ರೈತರು ಮತ್ತು ವರ್ತಕ ಸಮುದಾಯದ ನಡುವೆ ಮುಖಾಮುಖಿ ಚರ್ಚೆ ನಡೆಸುವ ಭರವಸೆ ನೀಡಿದರು.