ಕಾರಟಗಿ: ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕು ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರಿಗೆ ನ್ಯಾಯೋಚಿತವಾಗಿ ದೊರೆಯಬೇಕಾದ ಸೌಲಭ್ಯ ನೀಡಬೇಕು. ಸರ್ಕಾರ ಕೇವಲ ೧೩ ಸಾವಿರ ನೌಕರರಿಗೆ ಮಾತ್ರ ಹಳೆಯ ಪಿಂಚಣಿ ಸೌಲಭ್ಯ ನೀಡಲು ಅವಕಾಶ ಕಲ್ಪಿಸಿ ಆದೇಶ ಮಾಡಿದೆ. ಇದರಿಂದ ಪಿಂಚಣಿದಾರರಿಗೆ ಅನ್ಯಾಯವಾಗಿದೆ. ಕೂಡಲೇ ರಾಜ್ಯ ಸರ್ಕಾರ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಹಳೆಯ ಪಿಂಚಣಿ ಸೌಲಭ್ಯ ನೀಡುವುದಾಗಿ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿತ್ತು. ಪಿಂಚಣಿ ಸೌಲಭ್ಯಕ್ಕಾಗಿ ಸುಮಾರು ೩ ಲಕ್ಷ ನೌಕರರು ಸುದೀರ್ಘ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕೇವಲ 13 ಸಾವಿರ ನೌಕರರಿಗೆ ಮಾತ್ರ ಹಳೆಯ ಪಿಂಚಣಿ ಸೌಲಭ್ಯ ನೀಡಲು ಆವಕಾಶ ಕಲ್ಪಿಸಿದೆ. ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಈ ಕೂಡಲೇ ೩ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಅನುದಾನಿತ ನೌಕರರಿಗೂ ಕೂಡ ಸರ್ಕಾರಿ ನೌಕರರರಿಗೆ ನೀಡಲಾಗುವ ಜ್ಯೋತಿ ಸಂಜೀವಿನಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸರ್ಕಾರಿ ಅನುದಾನಿತ ಶಾಲಾ, ಕಾಲೇಜು ಎಂದು ಅನುದಾನಿತ ನೌಕರರಿಗೆ ತಾರತಮ್ಯ ಮಾಡಬಾರದು ಎಂಬುದೂ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಲು ಶೀಘ್ರ ಕ್ರಮ ಕೈಗೊಂಡು ಆದೇಶ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಶಿಕ್ಷಕರಾದ ವೀರೇಶ ಮ್ಯಾಗೇರಿ, ವಿಜಯ ವೈದ್ಯ, ಅಮರೇಶ ಪಾಟೀಲ್, ವೀರಭದ್ರಪ್ಪ ಬಡಿಗೇರ, ವೀರನಗೌಡ ಪಾಟೀಲ್, ಜಗದೀಶ್ ಭಜಂತ್ರಿ, ಲಿಂಗರಾಜ ಮೇಲಿನಮನಿ, ದೇವೇಂದ್ರಪ್ಪ ವಡ್ಡೋಡಗಿ, ಗಿರೀಶ್ ಯರಡೊಣಾ, ಎಂ.ಡಿ. ಇಬ್ರಾಹಿಂ, ನಾಗಭೂಷಣ, ಪಂಪಾಪತಿ ನಾಡಿಗೇರ, ರವಿ ನಾಯಕ, ವಿರೂಪಾಕ್ಷಪ್ಪ ಸಜ್ಜನ್, ಮೆಹಬೂಬ್ ಕಿಲ್ಲೇದಾರ್ ಇದ್ದರು.