ಕರವೇ ವತಿಯಿಂದ ಬೃಹತ್ ಪ್ರತಿಭಟನೆ । ಡಿಸಿ ಮುಖಾಂತರ ಸಿಎಂಗೆ ಮನವಿ ಕನ್ನಡಪ್ರಭ ವಾರ್ತೆ ಯಾದಗಿರಿಕರ್ನಾಟಕ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಕರವೇ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ವಿಶೇಷವಾಗಿ ಬೆಂಗಳೂರು ದೊಡ್ಡ ಪ್ರಮಾಣದ ವಲಸೆಯಿಂದ ಬಸವಳಿದು ಹೋಗುತ್ತಿದೆ. ಕನ್ನಡಿಗರಿಗೆ ಈಗ ಉದ್ಯೋಗವಿಲ್ಲದಂತಾಗಿದೆ. ಕನ್ನಡ ನೆಲದಲ್ಲಿ ಸ್ಥಾಪಿತವಾಗಿರುವ ಖಾಸಗಿ ಸಂಸ್ಥೆಗಳು ಹೊರ ರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನೇ ನೇಮಿಸಿಕೊಳ್ಳುತ್ತಿದ್ದು, ಅವರು ತಮ್ಮ ತಮ್ಮ ರಾಜ್ಯದ ಯುವಕ-ಯುವತಿಯರನ್ನು ಕರೆತಂದು ಕೆಲಸ ಕೊಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ದಿನೇ ದಿನೇ ಕುಸಿಯುತ್ತಿದ್ದು, ಹೀಗೆ ಮುಂದುವರೆದರೆ ಕನ್ನಡಿಗರು ಮುಂಬರುವ ದಿನಗಳಲ್ಲಿ ತಮ್ಮ ನೆಲದಲ್ಲಿ ತಾವೇ ಅತಂತ್ರರಾಗಿ ನರಕಯಾತನೆ ಅನುಭವಿಸುವ ಸ್ಥಿತಿ ಬಂದೊದಗಲಿದೆ ಎಂದರು.ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ (ಪಿಎಸ್‌ಯು)ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100 ಮೀಸಲಾತಿ ನೀಡಬೇಕು.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಘಟಕಗಳು ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ಅನುಕ್ರಮವಾಗಿ ಗ್ರೂಪ್ ''''''''ಬಿ ಮತ್ತು ಗ್ರೂಪ್ ''''''''ಎ'''''''' ಉದ್ಯೋಗಗಳಲ್ಲಿ ಕನ್ನಡಿಗರಿಗೆ ಕನಿಷ್ಠ 80 ಪ್ರತಿಶತ ಮತ್ತು 65 ಮೀಸಲಾತಿ ನೀಡಬೇಕು ಎಂದು ಸಮಿತಿಯು ಶಿಫಾರಸು ನೀಡಿತ್ತು. ಆದರೆ, ಡಾ.ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಜಾರಿಯಾಗಲೇ ಇಲ್ಲ. ಸರ್ಕಾರ ಜಾರಿ ಮಾಡಿದ ಕೆಲವು ಅಂಶಗಳನ್ನು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಗಳು ರಾಜ್ಯ ಸರ್ಕಾರದ ಕಾನೂನನ್ನು ಗಾಳಿಗೆ ತೂರಿ ಬೇರೆ ರಾಜ್ಯಗಳ ನೌಕರರನ್ನೇ ನೇಮಿಸಿಕೊಂಡುಬರುತ್ತಿವೆ. 2019ರಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯ ಮೂಲಕ ಸ್ಥಾಯಿ ಆದೇಶದ ನಿಯಮಗಳಿಗೆ ಬದಲಾವಣೆ ಮಾಡಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಒದಗಿಸಲು ಖಾಸಗಿ ವಲಯಕ್ಕೆ ಸೂಚಿಸಿತಾದರೂ ಎಷ್ಟು ಪ್ರಮಾಣದಲ್ಲಿ ಆದ್ಯತೆ ನೀಡಬೇಕು ಎಂಬುದು ಸ್ಪಷ್ಟವಿರಲಿಲ್ಲ. ಹೀಗಾಗಿ ಈ ಕಾನೂನಿಗೆ ಯಾವ ಬಲವೂ ಇರಲಿಲ್ಲ, ಅರ್ಥವೂ ಇರಲಿಲ್ಲ.ಈ ಹಿನ್ನೆಲೆ ಸೋಮವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡು, ಆದಷ್ಟು ಶೀಘ್ರವೇ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸಂಬಂಧ ಸಮಗ್ರ ಕಾಯ್ದೆ ರೂಪಿಸಬೇಕು ಎಂದು ಮನವಿ ಮಾಡಿದರು.