ಬಡವರಿಗೆ ನಿವೇಶನ, ಸ್ಮಶಾನಕ್ಕಾಗಿ ಹತ್ತು ಎಕರೆ ಜಮೀನು ಒದಗಿಸಲು ಒತ್ತಾಯ

KannadaprabhaNewsNetwork | Published : May 15, 2024 1:32 AM

ಸಾರಾಂಶ

ನಗರದ ಎಸ್‌ಸಿ, ಎಸ್ ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಬಡ ಕುಟುಂಬಗಳಿಗೆ ಜಂಬುನಾಥನಹಳ್ಳಿ ಹಾಗೂ ಸಂಕ್ಲಾಪುರದಲ್ಲಿರುವ 365 ಎಕರೆ 97 ಸೆಂಟ್ಸ್‌ ಸರ್ಕಾರಿ ಜಮೀನಿನಲ್ಲಿ ತಲಾ 30/40 ಅಡಿ ಅಳತೆಯ ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆನಗರದ ಹೊರವಲಯದ ಜಂಬುನಾಥನಹಳ್ಳಿ, ಸಂಕ್ಲಾಪುರ ಗ್ರಾಮದಲ್ಲಿರುವ ಸರ್ಕಾರಿ ಜಮೀನಿನಲ್ಲಿ ವಸತಿ ರಹಿತರಿಗೆ ನಿವೇಶನ ಒದಗಿಸಬೇಕು ಮತ್ತು ವಾಲ್ಮೀಕಿ ನಾಯಕ ಸಮಾಜಕ್ಕೆ ಸ್ಮಶಾನಕ್ಕಾಗಿ ಹತ್ತು ಎಕರೆ ಜಮೀನು ಮಂಜೂರು ಮಾಡಬೇಕು ಎಂದು ದಲಿತ ಹಕ್ಕುಗಳ ಸಮಿತಿ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ಗೆ ಮನವಿ ಸಲ್ಲಿಸಲಾಯಿತು.ನೂತನ ವಿಜಯನಗರ ಜಿಲ್ಲೆ ಘೋಷಣೆಯಾದ ಬಳಿಕ ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲಿ ನಿವೇಶನಗಳು ಹಾಗೂ ಮನೆ ಬಾಡಿಗೆ ದುಬಾರಿಯಾಗಿದೆ. ಇದರ ಪರಿಣಾಮ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ನಿವೇಶನ ಕೈಗೆಟುಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಎಸ್‌ಸಿ, ಎಸ್ ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಬಡ ಕುಟುಂಬಗಳಿಗೆ ಜಂಬುನಾಥನಹಳ್ಳಿ ಹಾಗೂ ಸಂಕ್ಲಾಪುರದಲ್ಲಿರುವ 365 ಎಕರೆ 97 ಸೆಂಟ್ಸ್‌ ಸರ್ಕಾರಿ ಜಮೀನಿನಲ್ಲಿ ತಲಾ 30/40 ಅಡಿ ಅಳತೆಯ ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮುಖಂಡ ಮರಡಿ ಜಂಬಯ್ಯ ನಾಯಕ ಮಾತನಾಡಿ, ನಗರದಲ್ಲಿ ಬಡವರು ನಿವೇಶನ ಇಲ್ಲದೇ ಪರದಾಡುತ್ತಿದ್ದಾರೆ. ಬಡವರಿಗೆ ನಿವೇಶನ ಒದಗಿಸಬೇಕು ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ನಗರದಲ್ಲಿ ಬಡವರ ಸಂಖ್ಯೆ ಜಾಸ್ತಿ ಇದೆ. ಬಡ ಕೂಲಿ ಕಾರ್ಮಿಕರು ಕೂಡ ನಿವೇಶನ, ಮನೆ ಇಲ್ಲದೇ ದುಸ್ತರ ಬದುಕು ನಡೆಸುತ್ತಿದ್ದಾರೆ. ಬಡವರಿಗೆ ಸೂರು ಒದಗಿಸಲು ಕ್ರಮವಹಿಸಬೇಕು. ಇನ್ನೂ ವಾಲ್ಮೀಕಿ ನಾಯಕ ಸಮಾಜಕ್ಕೆ ಪ್ರತ್ಯೇಕ ಸ್ಮಶಾನ ನಿರ್ಮಾಣಕ್ಕೆ ಹತ್ತು ಎಕರೆ ಭೂಮಿ ಒದಗಿಸುವಂತೆ ಕಳೆದ 9 ವರ್ಷ ಗಳಿಂದ ಮನವಿ ಸಲ್ಲಿಸಲಾಗುತ್ತಿದೆಯಾದರೂ, ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಆದಷ್ಟು ಬೇಗ ರುದ್ರಭೂಮಿಗೆ ಜಾಗ ಒದಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಈ ಬಗ್ಗೆ ನಿಯಾಮನುಸಾರ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಮುಖಂಡರಾದ ಬಿಸಾಟಿ ತಾಯಪ್ಪ ನಾಯಕ, ಎಂ. ಧನರಾಜ್, ಬಿ. ರಮೇಶ್ ಕುಮಾರ್, ಬಿ. ಸೂರ್ಯ ಕಿರಣ, ಬಿ.ಯಮನೂರಪ್ಪ ಇದ್ದರು.

Share this article