ಪ್ರಸಕ್ತ ವರ್ಷದಿಂದಲೇ ಕಾನೂನು ಕಾಲೇಜು ಆರಂಭಿಸಲು ಒತ್ತಾಯ

KannadaprabhaNewsNetwork | Published : Jun 30, 2024 12:52 AM

ಸಾರಾಂಶ

ಪ್ರಸಕ್ತ ವರ್ಷದಿಂದಲೇ ಸರ್ಕಾರಿ ಕಾನೂನು ಕಾಲೇಜು ಆರಂಭಿಸಲು ಮತ್ತು ನಗರದಲ್ಲಿಯೇ ಕಟ್ಟಡ ಕಟ್ಟುವಂತೆ ಒತ್ತಾಯಿಸಿ ಎಸ್ಎಫ್ಐ ಜಿಲ್ಲಾ ಸಮಿತಿ ಕಾರ್ಯಕರ್ತರು ಶಾಸಕ, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಮನವಿ ಸಲ್ಲಿಸಲಾಯಿತು.

ಹಾವೇರಿ: ಪ್ರಸಕ್ತ ವರ್ಷದಿಂದಲೇ ಸರ್ಕಾರಿ ಕಾನೂನು ಕಾಲೇಜು ಆರಂಭಿಸಲು ಮತ್ತು ನಗರದಲ್ಲಿಯೇ ಕಟ್ಟಡ ಕಟ್ಟುವಂತೆ ಒತ್ತಾಯಿಸಿ ಎಸ್ಎಫ್ಐ ಜಿಲ್ಲಾ ಸಮಿತಿ ಕಾರ್ಯಕರ್ತರು ಶಾಸಕ, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಹಾವೇರಿ ಜಿಲ್ಲಾ ಕೇಂದ್ರವಾಗಿ 26 ವರ್ಷಗಳು ಉರುಳಿದರೂ ಜಿಲ್ಲೆಯ ವಿದ್ಯಾರ್ಥಿಗಳು ನೂರಾರು ಸಮಸ್ಯೆಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ. ವಿದ್ಯಾರ್ಥಿ ಸಮುದಾಯಕ್ಕೆ ಅತ್ಯಂತ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಅವರನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿಸಲು ಹೊರಟಿದ್ದಾರೆ. ನೂರಾರು ವಿದ್ಯಾರ್ಥಿಗಳು ಪದವಿ ಮುಗಿಸಿ ಉನ್ನತ ಶಿಕ್ಷಣ ಪಡೆಯಬೇಕು, ಕಾನೂನು ಪದವಿ ಪಡೆಯಬೇಕು ಎಂದರೆ ಬೇರೆ ಜಿಲ್ಲೆಗಳಿಗೆ ಹೋಗಬೇಕಿದೆ. ಎಸ್ಎಫ್ಐ ಅನೇಕ ವರ್ಷಗಳಿಂದ ಹಾವೇರಿ ಜಿಲ್ಲೆಗೊಂದು ಕಾನೂನು ಕಾಲೇಜು ಮಂಜೂರು ಮಾಡುವಂತೆ ಹೋರಾಟ ಮಾಡುತ್ತಾ ಬಂದಿದೆ. ಇದರ ಪ್ರತಿಫಲವಾಗಿ ಕಳೆದ ಸರ್ಕಾರ ಘೋಷಣೆ ಮಾಡಿದ್ದು. ಕಾನೂನು ಪದವಿ ಪಡೆಯ ಬಯಸುವ ನೂರಾರು ವಿದ್ಯಾರ್ಥಿಗಳು ಹಾವೇರಿಯಲ್ಲಿ ಸರ್ಕಾರಿ ಕಾಲೇಜ್ ಪ್ರಾರಂಭವಾಗಬಹುದು ಎಂದು ಎದುರು ನೋಡುತ್ತಿದ್ದಾರೆ. ಆದರೆ ಎರಡುಮೂರು ವರ್ಷ ಕಳೆದರು ಯಾವುದೇ ರೀತಿಯ ಪ್ರಕ್ರಿಯೆ ಶುರುವಾಗದಿರುವುದು ಖಂಡನೀಯ ಎಂದು ಹೇಳಿದರು. ನಗರದಿಂದ ದೂರದ ಯಾವುದೇ ಸಾರಿಗೆ ಸಂಪರ್ಕ ಇಲ್ಲದಿರುವ ನೆಲೋಗಲ್ ಗುಡ್ಡದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಅಲ್ಲಿಗೆ ಬಸ್ ಸೌಲಭ್ಯವಿಲ್ಲ. ದ್ವಿಚಕ್ರ ವಾಹನಗಳು ಹೋಗಲೂ ಸರಿಯಾದ ರಸ್ತೆಯಿಲ್ಲ. ಆದ್ದರಿಂದ ನಗರದಲ್ಲಿಯೇ ಕಟ್ಟಡ ಕಟ್ಟವಂತಾಗಬೇಕು ಹಾಗೂ ಪ್ರಸಕ್ತ ವರ್ಷದಿಂದಲೇ ಪ್ರಾರಂಭಿಸಲು ಮುನಿಸಿಪಲ್ ಮೈದಾನದಲ್ಲಿ ನಡೆಸಲು ಎಲ್ಲಾ ರೀತಿಯ ಅವಕಾಶಗಳಿವೆ ಎಂದು ಸಂಘಟನೆ ಪ್ರಮುಖರು ಮನವಿ ಮಾಡಿದರು.

ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್., ಸುಲೆಮಾನ್ ಮತ್ತಿಹಳ್ಳಿ, ಲಕ್ಷ್ಮಣ ಕೆಂಗಪ್ಪಳವರ, ನಾಗರಾಜ ಲಮಾಣಿ, ಪ್ರದೀಪ್ ಎಸ್. ಆರ್, ಮಾಲತೇಶ್ ನೆಗಳೂರ, ಈಸ್ವರ ಡಿ. ಎಚ್., ದಯಾನಂದ ಹಿರೇಮಠ ಉಪಸ್ಥಿತರಿದ್ದರು.

Share this article