ರಾಮನಗರ: ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆ ಮುಂದೂಡಿರುವುದನ್ನು ಖಂಡಿಸಿ ಜೆಡಿಎಸ್ - ಬಿಜೆಪಿ ರೈತ ಮುಖಂಡರು ನಗರದ ಕಂದಾಯ ಭವನದಲ್ಲಿರುವ ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಕ್ರಮ ಖಂಡಿಸಿದ ಬಿಜೆಪಿ - ಜೆಡಿಎಸ್ ಹಾಗೂ ರೈತ ಮುಖಂಡರು ಜಿಲ್ಲಾ ಸಹಕಾರ ಸಂಘಗಳ ನೊಂದಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಜಿಲ್ಲಾ ನೊಂದಣಾಧಿಕಾರಿಗಳು ಕಚೇರಿಯಲ್ಲಿ ಇರಲಿಲ್ಲ. ಸಹಕಾರ ಇಲಾಖೆಯಿಂದ ಸರಿಯಾದ ಮಾಹಿತಿ ದೊರೆಯದ ಕಾರಣ ಜಿಲ್ಲಾಧಿಕಾರಿಗಳಿಗೆ ಮುಖಂಡರು ವಿಷಯ ತಿಳಿಸಿದರು.
ಸಹಕಾರ ನಿಬಂಧಕರ ಕಚೇರಿಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆ ವಿಷಯ ತಿಳಿದ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಅವರನ್ನು ಕಳುಹಿಸಿ ರೈತ ಮುಖಂಡರ ಮನವಿ ಆಲಿಸಲು ಸೂಚಿಸಿದರು. ತಹಸೀಲ್ದಾರ್ ತೇಜಸ್ವಿನಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದರು. ಈ ವೇಳೆ ಹಳ್ಳಿಮಾಳ ಸೊಸೈಟಿ ಚುನಾವಣೆ ಸಂಬಂಧ ಚುನಾವಣಾಧಿಕಾರಿಗಳು ನಡೆದುಕೊಂಡಿರುವ ಕ್ರಮದ ಬಗ್ಗೆ ಕಿಡಿಕಾರಿದರು.ಸಹಕಾರ ಸಂಘಗಳ ಅಧಿಕಾರಿಗಳು ಒಂದು ಪಕ್ಷದ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಹಲವಾರು ಸಂಘಗಳಲ್ಲಿ ಚುನಾವಣೆ ನಡೆಸುತ್ತಿಲ್ಲ. ಸಹಕಾರ ತತ್ವವನ್ನು ಗಾಳಿಗೆ ತೂರಿದ್ದಾರೆ. ಕೂಡಲೇ ಚುನಾವಣೆ ನಡೆಸಬೇಕು ಪೋಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಮಾಡುತ್ತದೆ. ಇದು ಒತ್ತಡ ತಂತ್ರ ಸೋಮವಾರವೇ ಚುನಾವಣೆ ಸಂಘಕ್ಕೆ ನಡೆಸಿ ಕಾನೂನು ಎಲ್ಲರಿಗೂ ಒಂದೇ ಎಂದು ತೋರಿಸಬೇಕು ಎಂದು ಒತ್ತಾಯಿಸಿದರು.
ಸದರಿ ಸಂಘದಲ್ಲಿ 7 ಮಂದಿ ಜೆಡಿಎಸ್ ಬೆಂಬಲಿತ 4 ಮಂದಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿದ್ದು, ಚುನಾವಣೆ ನಡೆದರೆ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗುತ್ತದೆ ಎಂದು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಮತ್ತು ಕಾಂಗ್ರೆಸ್ ಮುಖಂಡರು ಜೆಡಿಎಸ್ ಬೆಂಬಲಿತರ ಪೈಕಿ ಕೆಲವರನ್ನು ತಮ್ಮತ್ತ ಸೆಳೆಯಲು ಹುನ್ನಾರ ನಡೆಸಿ ಪೊಲೀಸರು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ತಂದು ಚುನಾವಣೆಯನ್ನು ಮುಂದೂಡಿಸಿದ್ದಾರೆ ಎಂದು ಮುಖಂಡರು ಆರೋಪಿಸಿದರು.ಮುಖಂಡರ ಮನವಿ ಆಲಿಸಿದ ತಹಸೀಲ್ದಾರ್ ತೇಜಸ್ವಿನಿರವರು ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳ ಬಳಿ ಇಲ್ಲಿನ ವಿಷಯ ತಿಳಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಬಳಿ ಜಿಲ್ಲಾಧಿಕಾರಿಗಳು ಚರ್ಚಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರತಿಭಟನಾ ನಿರತರಿಗೆ ಮನವರಿಕೆ ಮಾಡಿಕೊಟ್ಟರು. ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ. ರುದ್ರೇಶ್, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ. ಅಶ್ವತ್ಥ್ , ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ರೈತಮೋರ್ಚಾ ಅಧ್ಯಕ್ಷ ಪ್ರಕಾಶ್, ಗ್ರೇಟರ್ ಬೆಂಗಳೂರು - ಬಿಡದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ವರದರಾಜು , ಮುಖಂಡರಾದ ಮುರಳೀಧರ್, ಸಬ್ಬಕೆರೆ ಶಿವಲಿಂಗಯ್ಯ, ಎಸ್.ಆರ್. ನಾಗರಾಜು, ನರಸಿಂಹಮೂರ್ತಿ, ರಾಮಕೃಷ್ಣಯ್ಯ, ನಾಗಾನಂದ್, ಪುಷ್ಪಲತ, ಮಹೇಶ್, ಚಂದ್ರಶೇಖರ್, ಜಗನ್ನಾಥ್, ರವಿ, ಕಾಳಯ್ಯ, ಮಂಜು, ಸಂಜಯ್ ಮತ್ತಿತರರು ಇದ್ದರು.29ಕೆಆರ್ ಎಂಎನ್ 2.ಜೆಪಿಜಿ
ರಾಮನಗರ ಜಿಲ್ಲಾ ನೊಂದಣಾಧಿಕಾರಿ ಕಚೇರಿಯಲ್ಲಿ ತಹಸೀಲ್ದಾರ್ ತೇಜಸ್ವಿನಿಯವರು ಬಿಜೆಪಿ - ಜೆಡಿಎಸ್ ಹಾಗೂ ರೈತ ಮುಖಂಡರ ಅಹವಾಲು ಆಲಿಸಿದರು.