ಸಂಡೂರು: ತಾಲೂಕಿನ ಉಬ್ಬಲಗುಂಡಿಯಲ್ಲಿ ಅದಿರು ಗಣಿ ಪ್ರದೇಶದ ಮರಗಳನ್ನು ಕಡಿದು, ಬೆಂಕಿ ಹಚ್ಚಿ, ಕಾಡು ನಾಶ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ತಾಲೂಕು ಸಮಿತಿ ಮುಖಂಡರು ಗುರುವಾರ ತೋರಣಗಲ್ಲಿನ ನಾಡಕಚೇರಿಯ ಉಪ ತಹಸೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಿಪಿಐ (ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ಅರಣ್ಯ ಹಾಗೂ ಬಗರ್ ಹುಕುಂ ಭೂ ಸಾಗುವಳಿದಾರರು ಭೂ ಹಕ್ಕುಪತ್ರ ದೊರೆಯದೆ ಪರದಾಡುತ್ತಿದ್ದಾರೆ. ಅಕ್ರಮ ಅದಿರು ಸಾಗಣೆ ಹಾಗೂ ಗಣಿಗಳ ಅರಣ್ಯ ಒತ್ತುವರಿ ಪ್ರಕರಣಗಳು ಮಾಸುವ ಮುನ್ನವೇ ಅರಣ್ಯ ಕಡಿದು ಬೆಂಕಿ ಹಚ್ಚುವ ಗಂಭೀರ ಪ್ರಕರಣ ನಡೆದರೂ, ಸಂಬಂಧಪಟ್ಟ ಸರ್ಕಾರದ ಇಲಾಖೆಗಳು ಮೌನವಾಗಿವೆ ಎಂದು ದೂರಿದರು.
ಉಬ್ಬಲಗುಂಡಿ ಕಬ್ಬಿಣದ ಅದಿರು ಗಣಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಜ. ೧೮ರಂದು ಮಧ್ಯಾಹ್ನದ ಸಮಯದಲ್ಲಿ ಮರ ಕತ್ತರಿಸುವ ಮಿಷನ್ ಬಳಸಿ ಹಲವಾರು ಮರಗಳನ್ನು ನಾಶ ಮಾಡಿದ್ದಾರೆ. ಸಣ್ಣಪುಟ್ಟ ಮುಳ್ಳುಗಿಡಗಳು ಹಾಗೂ ಹುಲ್ಲು ತಮ್ಮ ಕೆಲಸಕ್ಕೆ ಅಡ್ಡಿ ಬರುತ್ತವೆ ಎಂದು ಅವುಗಳಿಗೆ ಬೆಂಕಿ ಹಚ್ಚಿ, ಹಲವಾರು ಎಕರೆಯಷ್ಟು ಅರಣ್ಯವನ್ನು ಸುಟ್ಟು ನಾಶ ಮಾಡಿದ್ದಾರೆ. ಇದುವರೆಗೂ ಸರ್ಕಾರದ ಅರಣ್ಯ ಇಲಾಖೆಯ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಸ್ಥಳ ಪರಿಶೀಲನೆಗೆ ಬರಲಿಲ್ಲ ಹಾಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಮಾಹಿತಿ ನೀಡಿದವರನ್ನು ಬೆದರಿಸಲಾಗುತ್ತಿದೆ. ಅರಣ್ಯಕ್ಕೆ ಬೆಂಕಿ ಹಚ್ಚುವುದು ಗಂಭೀರ ಅಪರಾಧವಾಗಿದೆ ಎಂದು ಹೇಳಿದರು.ಮರಗಳನ್ನು ಕಡಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೆ ಗಣಿಗೆ ಸಂಬಂಧಿಸಿದ ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧ ದಾವೆ ಹೂಡಿ, ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ವಿ.ಎಸ್. ಶಿವಶಂಕರ್, ಪಂಪನಗೌಡ ಕುರೆಕುಪ್ಪ, ಎ. ಸ್ವಾಮಿ, ಎಂ. ಖಲಂದರಬಾಷಾ, ಎಸ್. ಕಾಲುಬಾ, ವಿ. ದೇವಣ್ಣ ಮುಂತಾದವರು ಉಪಸ್ಥಿತರಿದ್ದರು.