ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗ್ರಾಪಂ ಮಟ್ಟದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಅನುದಾನ ಸದ್ಬಳಕೆ ಹಾಗೂ ಫಲಾನುಭವಿಗಳ ಸ್ಥಿತಿಗತಿಗಳ ಕುರಿತು ಪರಿಶೀಲನೆ ಮಾಡಲು ತಾಲೂಕು ಮಟ್ಟದ ಪರಿಶೀಲನಾ ತಂಡ ರಚನೆ ಮಾಡಿ, ಆಗಿದಾಂಗೆ ಭೇಟಿ ನೀಡಲು ಸೂಕ್ತ ಕ್ರಮ ವಹಿಸುವುದಾಗಿ ತಹಸೀಲ್ದಾರ್ ಗಿರಿಜಾ ತಿಳಿಸಿದರು. ಅಂಬೇಡ್ಕರ್ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್‌ಇಪಿ, ಟಿಎಸ್‌ಪಿ ಯೋಜನೆಯಡಿ ಅನುದಾನದಡಿಯಲ್ಲಿ ತಾಲೂಕು ಮಟ್ಟದಲ್ಲಿ ಅಯಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಯ ವತಿಯಿಂದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಅನುದಾನ ಹಾಗೂ ಸವಲತ್ತುಗಳನ್ನು ನೀಡಲಾಗುತ್ತಿದೆ. ಇವೆಲ್ಲವು ಸಮರ್ಪಕವಾಗಿ ಅರ್ಹರಿಗೆ ತಲುಪುತ್ತಿವೆ ಎಂಬುವುದು ಖಾತರಿಯಾಗಬೇಕಾಗಿದೆ. ಅಲ್ಲದೇ ಪಂಚಾಯಿತಿ ಮಟ್ಟದಲ್ಲಿ ಆಯ್ಕೆಯಾಗಿ ಫಲಾನುಭವಿಗಳ ಸ್ಥಿತಿಗತಿಗಳ ಹಾಗೂ ಅರ್ಥಿಕ ಪ್ರಗತಿಯನ್ನು ಖುದ್ದು ಹೋಗಿ ಪರಿಶೀಲನೆ ಮಾಡುವಂತೆ ತಾಪಂ ಇಒ ಹಾಗೂ ತಾಲೂಕು ಅಧಿಕಾರಿಗಳ ನೇತೃತ್ವದಲ್ಲಿ ತಂಡ ಕಳುಹಿಸುವುದಾಗಿ ಸಭೆಗೆ ತಿಳಿಸಿದರು. ಈ ಸಂಬಂಧ ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ. ಮಂಜುನಾಥ್, ದಡದಹಳ್ಳಿ ಶಂಕರ್, ಮುತ್ತಿಗೆ ಮೂರ್ತಿ, ಗಣೇಶಪ್ರಸಾದ್ ಹಾಗೂ ಅನೇಕ ಮುಖಂಡರು ಈ ಅನುದಾನಗಳ ಸದ್ಬಳಕೆ ಬಗ್ಗೆ ಚರ್ಚಿಸಿದರು. ದುರುಪಯೋಗದ ಬಗ್ಗೆ ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿ, ಪರಿಶೀಲನಾ ತಂಡ ರಚನೆ ಮಾಡುವ ಬಗ್ಗೆ ತಹಸೀಲ್ದಾರ್ ತಿಳಿಸಿದರು.ದಲಿತ ಮುಖಂಡ ರಾಮಸಮುದ್ರ ನಾಗರಾಜು ಮಾತನಾಡಿ, ನಗರಸಭೆಯಲ್ಲಿ ಎಸ್ಸಿ,ಎಸ್ಟಿ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಲ್ಯಾಪ್‌ಟಾಪ್ ವಿತರಣೆ ಮಾಡಿಲ್ಲ. ಆ ಮಕ್ಕಳು ಪೋಷಕರು ಅರ್ಜಿ ಸಲ್ಲಿಸಿ, ಪ್ರತಿ ನಿತ್ಯ ಕಚೇರಿಗೆ ಅಲೆಯುವಂತಾಗಿದೆ. ವಿದ್ಯಾರ್ಥಿಗಳ ವ್ಯಾಸಂಗವು ಮುಗಿಯುವ ಹಂತಕ್ಕೆ ಬಂದಿದೆ. ಇನ್ಯಾವಾಗ ಲ್ಯಾಪ್‌ಟಾಪ್ ನೀಡುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೌರಾಯುಕ್ತ ಎ.ರಾಮದಾಸ್, ಇದು ಸರ್ಕಾರ ಮಟ್ಟದಲ್ಲಿ ಅಂತಿಮ ತೀರ್ಮಾನವಾಗಿತ್ತು. ಅಲ್ಲದೇ ಚುನಾವಣಾ ಕಾರಣದಿಂದ ವಿಳಂಬವಾಯಿತು. ಈ ನಗರಾಭಿವೃದ್ದಿ ಇಲಾಖೆಯಿಂದ ಅನುಮೋದನೆ ದೊರೆತಿದೆ. ಅರ್ಜಿ ಸಲ್ಲಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಬೀದಿ ನಾಯಿ, ಚಿರತೆಗಳ ಹಾವಳಿ ತಪ್ಪಿಸಿ:ಹಳ್ಳಿಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ವೃದ್ದರು, ಮಕ್ಕಳು ಹಾಗೂ ಆಡು ಕುರಿಗಳ ಮೇಲೆ ಪದೇ ಪದೇ ದಾಳಿ ಮಾಡುತ್ತಿವೆ. ಹೆಬ್ಬಸೂರು, ದಡದಹಳ್ಳಿ, ಮುತ್ತಿಗೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬೀದಿ ನಾಯಿಗಳು ಹೆಚ್ಚಾಗಿವೆ. ನಾವು ಸಾಕಿರುವ ಮೇಕೆ, ದನ, ಕುರಿಗಳ ಮೇಲೆ ಚಿರತೆ ದಾಳಿ ಮಾಡುತ್ತಿವೆ. ಪಂಚಾಯಿತಿ ಗಮನಕ್ಕೆ ತಂದರೂ ಅವರು ನಾಯಿಗಳನ್ನು ಹಿಡಿಯಲು ಮುಂದಾಗಿಲ್ಲ. ಪ್ರಾಣಿ ದಯಾ ಸಂಘದವರ ವಿರೋಧ ಮಾಡುತ್ತಾರೆ ಎಂಬ ಉತ್ತರ ನೀಡುತ್ತಾರೆ. ಅರಣ್ಯ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಮುಖಂಡರಾದ ದಡದಹಳ್ಳಿ ಶಂಕರ್, ಮುತ್ತಿಗೆ ಮೂರ್ತಿ ಸಭೆಗೆ ಉತ್ತರಿಸಿದರು.ತಹಸೀಲ್ದಾರ್ ಗಿರಿಜಾ ಮಾತನಾಡಿ, ನಾಯಿಗಳ ಹಾವಳಿ ತಪ್ಪಿಸಲು ಅವುಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ ಸಂತತಿ ಕಡಿಮೆ ಮಾಡಲು ಕ್ರಮ ವಹಿಸಲಾಗುತ್ತದೆ. ನಾಯಿಗಳಿಗೆ ಚಿಕಿತ್ಸೆ ನೀಡಲು ಕ್ರಮ ವಹಿಸುವಂತೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗೆ ತಹಸೀಲ್ದಾರ್ ಗಿರಿಜಾ ಸೂಚಿಸಿದರು. ಚಿರತೆ ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಡುವುದು ಹಾಗೂ ವಾಚರ್‌ಗಳನ್ನು ನೇಮಕ ಮಾಡಿ ಚಿರತೆಗಳ ಚಲನವಲನ ಗಮನಿಸಿ, ಗ್ರಾಮಸ್ಥರ ದುಗುಡ ಕಡಿಮೆ ಮಾಡಲು ಶ್ರಮಿಸಬೇಕು ಎಂದರು. ಅಂಬೇಡ್ಕರ್ ಬಡಾವಣೆಯ ದಲಿತ ಮಹಿಳೆ ನೇತ್ರಾವತಿ ಹೆರಿಗೆ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷದಿಂದ ತಾಯಿ, ಮಗು ಇಬ್ಬರು ಮೃತಪಟ್ಟಿದ್ದರು. ಆಗ ಆರೋಗ್ಯ ಇಲಾಖೆ ಕುಟುಂಬಕ್ಕೆ ಮಾನವೀಯತೆ ಆಧಾರದಲ್ಲಿ ಹೊರ ಗುತ್ತಿಗೆ ನೌಕರಿ ನೀಡುವ ಭರವಸೆ ನೀಡಿದ್ದರು. ಇದುವರೆಗೂ ಆ ಕುಟುಂಬಕ್ಕೆ ನ್ಯಾಯ ಕಲ್ಪಿಸಿಲ್ಲ ಎಂದು ಸಿ.ಕೆ. ಮಂಜುನಾಥ್ ದೂರಿದರು. ತಾಲೂಕು ವೈದ್ಯಾಧಿಕಾರಿ ಶ್ರೀನಿವಾಸ್ ಇನ್ನು 15 ದಿನಗಳಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗೆ ವರದಿ ನೀಡಿ, ಕ್ರಮ ವಹಿಸುವುದಾಗಿ ತಿಳಿಸಿದರು. ಸಭೆಯಲ್ಲಿ ತಾಪಂ ಇಒ ಪೂರ್ಣಿಮಾ, ಡಿವೈಎಸ್ಪಿ ಲಕ್ಷ್ಮಯ್ಯ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಂಜುಂಡಯ್ಯ, ನಗರಸಭೆ ಆಯುಕ್ತ ರಾಮದಾಸ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುಬ್ಬರಾಯ, ಪೂರ್ವ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್, ದಲಿತ ಮುಖಂಡರಾದ ಕೆ.ಎಂ.ನಾಗರಾಜು, ಬಸವರಾಜು, ಮಹೇಶ್ ಕುದರ್, ಸಿ.ಕೆ. ರವಿಕುಮಾರ್, ಶಿವಣ್ಣ, ಕೃಷ್ಣಮೂರ್ತಿ, ಪರ್ವತರಾಜು, ಹಂಡ್ರಕಳ್ಳಿ ಬಸವರಾಜು ಭಾಗವಹಿಸಿದ್ದರು.