ಕನ್ನಡಪ್ರಭ ವಾರ್ತೆ ಕಾಳಗಿ
ಅಧಿಕಾರಿಗಳು ಕಚೇರಿಗೆ ನಿಗದಿತ ಸಮಯಕ್ಕೆ ಹಾಜರಾಗಿ ಸೇವೆ ನೀಡುವುದು ಆದ್ಯ ಕರ್ತವ್ಯವಾಗಿದೆ. ಸರ್ಕಾರಿ ನೌಕರರೆಂದು ಭಾವಿಸದೆ ಜನಸೇವೆ ಮಾಡುತ್ತೇವೆ ಎಂಬ ಪರಿಜ್ಞಾನ ಅರಿತುಕೊಂಡಗ ಮಾತ್ರ ಅಧಿಕಾರಿ ಜೀವನ ಸಾರ್ಥಕ ಎಂದು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು.ಪಟ್ಟಣದ ನೀಲಕಂಠ ಕಾಳೇಶ್ವರ ಮಂಗಲ ಮಂಟಪದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದೊಂದು ಕೆಲಸಕ್ಕೆ ತಕ್ಷಣವೇ ಪರಿಹಾರ ನೀಡುತ್ತೇವೆ, ಒಂದೊಂದು ಕೆಲಸಕ್ಕೆ ವಿಳಂಬವಾಗುತ್ತದೆ. ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳದಲ್ಲಿಯೇ ಕರೆಯಿಸಿ ಸಮಸ್ಯೆಗಳಿಗೆ ತಕ್ಕ ಪರಿಹಾರಗಳನ್ನು ಕಂಡುಕೊಳ್ಳಲು ಜಿಲ್ಲಾಧಿಕಾರಿಗಳು ಆದೇಶಿಸಿದರು.
ಕೆಲವರಿಗೆ ಸ್ಥಳದಲ್ಲಿಯೇ ಪಿಂಚಣಿ, ರೇಶನ್ ಕಾರ್ಡ್, ಆಯುಷ್ಮಾನ್ ಭಾರತ್, ಭಾಗ್ಯಲಕ್ಷ್ಮೀ ಬಾಂಡ್, ಪೌರ ಕಾರ್ಮಿಕರಿಗೆ ರೈನ್‌ಕೋಟ್, ರೈತರಿಗೆ ಮೇವಿನ ಬೀಜ, ಸಸಿಗಳನ್ನು ನೀಡಿದರು. ತೊಗರಿ, ಹೆಸರು, ಉದ್ದು ವಿವಿಧ ಬೆಳೆಗಳ ಮೇಲೆ ವಿಮೆ ಮಾಡಿಸಿಕೊಳ್ಳಬೇಕು. ಬೆಳೆ ಸಂರಕ್ಷಣೆಗಾಗಿ ಹೊಲಗಳಲ್ಲಿ ಆದಷ್ಟು ನೀರು ನಿಲ್ಲದಂತೆ ನೋಡಿಕೊಳ್ಳುವುದು ಸೇರಿ ಕೃಷಿ ಅಧಿಕಾರಿ ಜಂಟಿಯಾಗಿ ರೈತರಿಗೆ ಸಲಹೆ ನೀಡಿದರು.ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆ, ರೈತಾಪಿ ವರ್ಗ, ನೀರಾವರಿ, ಕುಡಿಯುವ ನೀರು, ನೆನೆಗುದಿಗೆ ಬಿದ್ದಿರುವ ರಸ್ತೆಗಳ ನಿರ್ಮಾಣ, ರೈತರ ಹೊಲಗಳ ಟಿಪ್ಪಣಿಗಳು, ರೈತರ ಹೊಲಗಳಿಗೆ ಹೋಗುವ ಹಣಾದಿ ರಸ್ತೆಗಳು, ಕಾಳಗಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ನೆನೆಗುದಿಗೆ ಬಿದ್ದಿರುವ ರೈತರ ಸಮಸ್ಯೆಗಳು, ಆರೋಗ್ಯ, ಶಿಕ್ಷಣ, ಬ್ಯಾಂಕ್ ವಹಿವಾಟುಗಳು, ಒಳಚರಂಡಿ, ಶೌಚಾಲಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕನ್ನಡಪರ ಸಂಘಟನೆಗಳು, ಹಿಂದೂ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು, ಮೈನಾರಿಟಿ ಸಂಘಟನೆಗಳು ಹಾಗೂ ತಾಲೂಕಿನ ನೂರಾರು ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಎಸ್‌ಪಿ ಅಡ್ಡೂರು ಶ್ರೀನಿವಾಸ ಮಾತನಾಡಿ, ಪ್ರತಿ ಹಳ್ಳಿ ಹಳ್ಳಿಗೆ ವಾಟ್ಸ್‌ಪ್ ಗ್ರೂಪ್ ಮಾಡಿ ಏನೇ ಸಮಸ್ಯೆ ಇದ್ದರು ತಾಲೂಕಿನ ಜನತೆ ಹಾಕಬಹುದು. ಜಾಬ್ ವೆರಿಪಿಕೇಶನ್, ಕಳ್ಳತನ ಹಲವಾರು ಸಮಸ್ಯೆಗಳ ಬಗ್ಗೆ ತಕ್ಷಣವೇ ನಾವು ಸ್ಪಂದನೆ ನೀಡಿ ಸಾರ್ವಜನಿಕ ಸಮಸ್ಯೆಗೆ ಪರಿಹಾರ ನೀಡುತ್ತೇವೆ. ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರೆ ದುಷ್ಟರನ್ನು ಸದೆಬಡೆಯುತ್ತೇವೆ ಎಂದು ಜನ ಸಾಮಾನ್ಯರಿಗೆ ತಿಳಿ ಹೇಳಿದರು.ಜಿಪಂ.ಯೋಜನಾ ನಿರ್ದೇಶಕ ಜಗದೇವಪ್ಪ, ಸಹಾಯ ಆಯುಕ್ತೆ ರೂಪಿಂದರ್ ಕೌರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಗ್ರೇಡ್ -1 ತಹಸೀಲ್ದಾರ್ ಘಮವತಿ ರಾಠೋಡ, ಗ್ರೇಡ್ -2 ತಹಸೀಲ್ದಾರ್ ರಾಜೇಶ್ವರಿ, ತಾಪಂ.ಇಓ ವಿಲಾಸ, ಪಪಂ.ಮುಖ್ಯಾಧಿಕಾರಿ ಪಂಕಜಾ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ವಿಶ್ವನಾಥ ಬಾಕಳೆ, ಬಿಇಒ ಶಶೀಧರ, ಸಿಇಒ ಜಗನ್ನಾಥ ರೆಡ್ಡಿ, ಸಿಡಿಪಿಒ ಸವಿತಾ ಮಡಿವಾಳ, ಡಾ.ವಿಜಯಲಕ್ಷ್ಮಿ ಹೆರೂರ ಇದ್ದರು.