ಕನ್ನಡಪ್ರಭ ವಾರ್ತೆ ಭಾರತೀನಗರ
ಸಮೀಪದ ಚಿಕ್ಕಅರಸಿನಕೆರೆ ಜಿಪಂ ವ್ಯಾಪ್ತಿಯ ಕಾಡುಕೊತ್ತನಹಳ್ಳಿಯಲ್ಲಿ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಪರ ಜೆಡಿಎಸ್- ಬಿಜೆಪಿ ಮುಖಂಡರು ಪ್ರಚಾರ ನಡೆಸಿದರು.ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಮಂಡ್ಯ ಜಿಲ್ಲೆಯ ರೈತರ ಬೆಳೆಗಳಿಗೆ ಕಾವೇರಿ ನೀರು ಸಿಗದಿರಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಕಾರಣ ಎಂದು ಆರೋಪಿಸಿದರು
ಸ್ಟಾರ್ ಚಂದ್ರು ಕೆಆರ್‌ಎಸ್‌ನಿಂದ ನೀರು ಹರಿಸುವ ವಿಶ್ವೇಶ್ವರಯ್ಯ ನಾಲೆಯ ಆಧುನೀಕರಣದ ಗುತ್ತಿಗೆ ಪಡೆದಿದ್ದು, ಕಾಮಗಾರಿಯ ನೆಪದಲ್ಲಿ ಜಿಲ್ಲೆಯ ನಾಲೆಗಳಲ್ಲಿ ನೀರು ಹರಿಯದಂತೆ ನೋಡಿಕೊಳ್ಳುವ ಮೂಲಕ ಬರಗಾಲ ಬರುವಂತೆ ಮಾಡಿದ್ದಾರೆ ಎಂದು ಆಪಾದಿಸಿದರು.ಜಿಲ್ಲೆಯಲ್ಲಿ ತೀವ್ರ ಬರಗಾಲ ಕಾಡಿದ್ದು, ರೈತರು ಬೆಳೆದ ಬೆಳೆಗಳು ನೀರಿಲ್ಲದೆ ಒಣಗುವಂತಾಗಿವೆ. ಇದಕ್ಕೆಲ್ಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅಲಿಯಾಸ್ ವೆಂಕಟರಮಣೇಗೌಡ ಕಾರಣ. ಹಣ ಬಲವಿರುವ ವ್ಯಕ್ತಿ ಎಂದು ಕಾಂಗ್ರೆಸ್ ಪಕ್ಷ ಚಂದ್ರು ಅವರಿಗೆ ಮಣೆ ಹಾಕಿದೆ. ಜಿಲ್ಲೆಯ ಎಲ್ಲಾ ರೈತ ಬಾಂಧವರು ಎಚ್ಚೆತ್ತುಕೊಂಡು ಚುನಾವಣೆಯಲ್ಲಿ ರೈತರ ಪರವಾಗಿ ನಿಂತು ಸಾಲ ಮನ್ನಾ ಮಾಡಿದ ಎನ್‌ಡಿಎ ಮೈತ್ರಿ ಕೂಟದ ಜಾ.ದಳ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡರಾದ ಡಿ.ಟಿ.ಸಂತೋಷ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗಾಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕು. ಗೆದ್ದರೆ ಕೇಂದ್ರ ಮಂತ್ರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿ ಅವರನ್ನು ಹಿಂದಿಕ್ಕಲು ನಾನಾ ರೀತಿಯ ಕುತಂತ್ರಗಳನ್ನು ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಮಹಿಳೆಯರ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದಾರೆ. ಮಹಿಳೆಯರನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಸಲು ಮುಂದಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಶೋಭೆಯಲ್ಲ ಎಂದು ಕಿಡಿಕಾರಿದರು.
ನಂತರ ಚಿಕ್ಕರಸಿನಕೆರೆ, ದೊಡ್ಡ ಅರಸಿನಕೆರೆ, ಮಾದರಹಳ್ಳಿ, ಯಡಗನಹಳ್ಳಿ, ಕಾಡುಕೊತ್ತನಹಳ್ಳಿ, ಕೆ.ಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪರ ಚುನಾವಣಾ ಪ್ರಚಾರ ನಡೆಸಲಾಯಿತು.ಸಭೆಯಲ್ಲಿ ಜೆಡಿಎಸ್ ಮುಖಂಡ ಎಸ್.ಗುರುಚರಣ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯನಹಳ್ಳಿ ರಾಜಣ್ಣ, ಮುಖಂಡರಾದ ಅರವಿಂದ್, ಕರಡಕೆರೆ ಹನುಮಂತೇಗೌಡ, ಡಿ.ಎ.ಕೆರೆ ಗ್ರಾಪಂ ಅಧ್ಯಕ್ಷ ಮಂಚೇಗೌಡ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.