ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಮುತ್ತುರಾಯಸ್ವಾಮಿ ದೇವಸ್ಥಾನದ ಸಮುದಾಯ ಭವನದ ಮುಂದುವರಿದ ಅಡುಗೆಮನೆ ಕಾಮಗಾರಿಗೆ (ವಿಧಾನ ಪರಿಷತ್ ಸದಸ್ಯ ಮಧು.ಜಿ.ಮಾದೇಗೌಡರ ಅನುದಾನದಲ್ಲಿ ನಾಲ್ಕು ಲಕ್ಷ ರು.) ಮಾಜಿ ಶಾಸಕ ಬಿ.ಪ್ರಕಾಶ್ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಮಾನವ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಧಾರ್ಮಿಕ ನಂಬಿಕೆಗಳಿಗೆ ದೇವಾಲಯಗಳೆಗೆ ತೆರಳಿ ಪೂಜೆ ಸಲ್ಲಿಸುವುದನ್ನು ಬಿಡುವುದಿಲ್ಲ. ಸನಾತನ ಕಾಲದಿಂದಲೂ ಬೆಳೆದು ಬಂದಿರುವ ಈ ಸಂಪ್ರದಾಯವನ್ನು ಪಾಲನೆ ಮಾಡಿಕೊಂಡು ಬರುತ್ತಿರುವ ನಾವುಗಳು ಹಬ್ಬ, ಹರಿದಿನ, ದೇಗುಲಗಳ ನಿರ್ಮಾಣ ಮುಂತಾದ ಕೆಲಸಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.ಶ್ರೀಮುತ್ತುರಾಯಸ್ವಾಮಿ ಶ್ರೀಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡರನ್ನು ಕೇಳಿಕೊಂಡಾಗ ಅವರು ತಮ್ಮ ಅನುದಾನದಿಂದ 4 ಲಕ್ಷ ರು. ನೀಡಿದ್ದಾರೆ. ದೇಗುಲಕ್ಕೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪ, ವಾಹನ ನಿಲುಗಡೆಗೆ ಸ್ಥಳಾವಕಾಶ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದರು. ಈ ವೇಳೆ ಡಾ.ಬಿ.ಬಸವರಾಜು ಗ್ರಾಮದ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಿಕ್ಕೇರಿ: ಶಿಕ್ಷಕ ವೃತ್ತಿ ಸೇರಿದಂತೆ ಸರ್ಕಾರಿ ನೌಕರಿಯಲ್ಲಿ ನಾವು ಸಲ್ಲಿಸುವ ಸೇವೆಯೇ ಕೊನೆವರೆಗೂ ನಮ್ಮನ್ನು ಕಾಯಲಿವೆ ಎಂದು ಡಿ.ಎಲ್.ಮಹೇಶ್ ಹೇಳಿದರು.ಬೂವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋಸಹಜ ನಿವೃತ್ತಿ ಹೊಂದಿದ ಶಿಕ್ಷಕ ಡಿ.ಎಲ್.ಮಹೇಶ್ ಅವರು ಗ್ರಾಮಸ್ಥರಿಂದ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಶಾಲೆ ಉಳಿದಿರುವುದೇ ಗ್ರಾಮೀಣ ಜನರ ಸಹಕಾರದಲ್ಲಿ. ಗ್ರಾಮಸ್ಥರು ಶಾಲೆ, ಶಿಕ್ಷಕರ ಮೇಲೆ ಇಟ್ಟಿರುವ ಪ್ರೀತಿಯಿಂದ ಈ ಶಾಲೆ ಉಳಿದಿದೆ ಎಂದರು.