ದೊಡ್ಡಬಳ್ಳಾಪುರ: ಇಲ್ಲಿನ ಹಿರಿಯ ರಾಜಕಾರಣಿ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ(90) ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ ಮೂವರು ಪುತ್ರಿಯರಿದ್ದಾರೆ. ಕಳೆದ ಕೆಲ ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ದೊಡ್ಡಬಳ್ಳಾಪುರದಲ್ಲಿ ಅಂತಿಮ ನಮನ:
ಬೆಂಗಳೂರಿನಿಂದ ಮೃತರ ಪಾರ್ಥೀವ ಶರೀರವನ್ನು ಶುಕ್ರವಾರ ಮಧ್ಯಾಹ್ನ ದೊಡ್ಡಬಳ್ಳಾಪುರಕ್ಕೆ ತರಲಾಯಿತು. ಇಲ್ಲಿನ ರೈಲು ನಿಲ್ದಾಣ ಬಳಿಯ ವಿ.ಕೃ.ಗೋಕಾಕ್ ವೃತ್ತದಿಂದ ಮೃತರ ಪಾರ್ಥೀವ ಶರೀರದ ಅಂತಿಮ ಯಾತ್ರೆ ಆಯೋಜಿಸಲಾಗಿತ್ತು. ಅಪಾರ ಅಭಿಮಾನಿಗಳು ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು. ಬಸ್ ನಿಲ್ದಾಣ, ಡಿಕ್ರಾಸ್, ತಾಲೂಕು ಕಚೇರಿ ವೃತ್ತ, ಪ್ರವಾಸಿ ಮಂದಿರ ವೃತ್ತಗಳಲ್ಲೂ ವೆಂಕಟಾಚಲಯ್ಯ ಅವರಿಗೆ ಗೌರವ ಸಲ್ಲಿಸಲಾಯಿತು.ಬಳಿಕ, ಅವರ ಸ್ವಗ್ರಾಮ ಹಣಬೆಯಲ್ಲಿನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರ ಸಂಜೆ ಹಣಬೆ ಗ್ರಾಮದಲ್ಲೇ ಮೃತರ ಅಂತ್ಯ ಸಂಸ್ಕಾರ ಬ್ರಾಹ್ಮಣರ ಸಂಪ್ರದಾಯದಂತೆ ನಡೆಯಿತು.
ಆರ್.ಜಿ.ವೆಂಕಟಾಚಲಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಮಾಜಿಕ ಮಾಧ್ಯಮದ ಮೂಲಕ ಸಂತಾಪ ಸೂಚಿಸಿದ್ದಾರೆ. ಜನ ಕೇಂದ್ರಿತ ನಾಯಕರಾಗಿದ್ದ ಅವರು, ತಮ್ಮದೇ ಆದ ವಿಶಿಷ್ಟ ವರ್ಚಸ್ಸು ಹೊಂದಿದ್ದರು. ದೊಡ್ಡಬಳ್ಳಾಪುರ ಭಾಗದ ಅಭಿವೃದ್ದಿಗೆ ಅವರ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಆರ್.ಜಿ.ವೆಂಕಟಾಚಲಯ್ಯ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.