ಕನ್ನಡಪ್ರಭ ವಾರ್ತೆ ಭಾರತೀನಗರ
ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದ ಶಾಂತಿಧಾಮದಲ್ಲಿ ನಡೆದ ಮಾಜಿ ಸಂಸದ ದಿ.ಜಿ.ಮಾದೇಗೌಡರ 3ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಜಿ.ಮಾದೇಗೌಡರ ಕುಟುಂಬದವರು ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು.ಹಿರಿಯ ಮುತ್ಸದ್ದಿ ಜಿ.ಮಾದೇಗೌಡರು ಅಗಲಿ ಇಂದಿಗೆ 3 ವರ್ಷ ಕಳೆದಿದ್ದರೂ ಅವರ ಕಾರ್ಯಕರ್ತರು ಸಮಾಧಿಗೆ ತಂಡೋಪತಂಡವಾಗಿ ಆಗಮಿಸಿ ಪೂಜೆಸಲ್ಲಿಸುತ್ತಿದ್ದ ವೇಳೆ ಭಾವುಕರಾಗಿದ್ದು ಕಂಡು ಬಂತು.
ಪುತ್ರ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಪತ್ನಿ ಜೆ.ವಿ.ಬಿಂದು, ಮೊಮ್ಮಗ ಆಶಯ್ ಮಧು , ಡಾ.ಪ್ರಕಾಶ್ ಸೇರಿ ಕುಟುಂಬ ವರ್ಗದವರು ಸಮಾಧಿಗೆ ಪೂಜೆ ಸಲ್ಲಿಸಿದರು. ಜಿ.ಮಾದೇಗೌಡರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿದರು. ಇದೇ ವೇಳೆ 2 ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ನಡೆಯಿತು.ಗೌಡರ ಸ್ಮಾರಕಕ್ಕೆ ಅಧ್ಯಾಪಕ-ಅಧ್ಯಾಪಕೇತರರು, ಕಾರ್ಯಕರ್ತರು, ಅಭಿಮಾನಿಗಳು, ವಿದ್ಯಾರ್ಥಿಗಳು ಸೇರಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳು ಕೂಡ ಪೂಜೆ ಮಾಡಿ ನಮನ ಸಲ್ಲಿಸಿದರು.
ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರು, ನಮ್ಮ ತಂದೆಯನ್ನು ಕಳೆದುಕೊಂಡು ಇಂದಿಗೆ 3 ವರ್ಷವಾಗಿದೆ. ಆದರೆ, ಅವರ ನೆನಪು ಸದಾ ನಮ್ಮ ಕುಟುಂಬದಲ್ಲಿ, ಕಾರ್ಯಕರ್ತರಲ್ಲಿ, ಅಭಿಮಾನಿಗಳಲ್ಲಿ ಕಾಡುತ್ತಿದೆ. ಅವರು ಮಾಡಿರುವಂತಹ ಕೆಲಸಗಳು ಸ್ಫೂರ್ತಿದಾಯಕವಾಗಿವೆ ಎಂದು ತಿಳಿಸಿದರು.ಸ್ಮಾರಕದ ಬಳಿ ಗೌಡರ ಮ್ಯೂಜಿಯಂ:
ನಾಡಿನ ನೆಲ, ಜಲಕ್ಕಾಗಿ ಮತ್ತು ಶಿಕ್ಷಣಕ್ಕೆ ಹೋರಾಟ ನಡೆಸಿದ ಜಿ.ಮಾದೇಗೌಡರ ಹೆಜ್ಜೆ ಗುರುತುಗಳನ್ನು ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡುವ ಉದ್ದೇಶದಿಂದ ಸ್ಮಾರಕದ ಬಳಿ ಮ್ಯೂಜಿಯಂ ನಿರ್ಮಾಣ ಮಾಡಲು ಚಿಂತನೆ ಮಾಡಲಾಗಿದೆ. ನಿರ್ಮಾಕ್ಕೆ ಕಾರ್ಯ ಸಿದ್ಧತೆಯನ್ನು ಶೀಘ್ರದಲ್ಲೇ ಮಾಡುತ್ತೇವೆ. ಅಲ್ಲಿ ಗೌಡರ ಹೋರಾಟದ ಜೀವಿತಾವಧಿಯ ಪುಟಗಳು ತೆರೆಯಲಿವೆ ಎಂದು ಹೇಳಿದರು.ಗೌಡರ ಸಾಧನೆ ಅಮರ:
ಮೊಮ್ಮಗ, ಕಾಂಗ್ರೆಸ್ ಮುಖಂಡ ಆಶಯ್ ಮಧು ಮಾತನಾಡಿ, ನಮ್ಮ ತಾತ ಜಿ.ಮಾದೇಗೌಡರು ಜಿಲ್ಲೆಯನ್ನು ರಾಜಕೀಯ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಆರೋಗ್ಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ್ದಾರೆ. ಬದುಕಿನುದ್ದಕ್ಕೂ ಹೋರಾಟದ ಹಾದಿಯಲ್ಲೇ ಪ್ರಾಣತೆತ್ತಿದ್ದಾರೆ. ಅವರ ಸಾಧನೆ ಅಮರವಾಗಿದೆ. ಇಂದಿಗೂ ಕೂಡ ಅಭಿಮಾನಿಗಳು, ಕಾರ್ಯಕರ್ತರು ಅವರ ಸ್ಮಾರಕಕ್ಕೆ ಪೂಜೆ ಸಲ್ಲಿಸುತ್ತಿರುವುದೇ ಅವರು ಮಾಡಿರುವ ಕೆಲಸಗಳಿಗೆ ಸಾಕ್ಷಿಯಾಗಿದೆ ಎಂದರು.ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಗಾಂಧಿತತ್ವದಡಿ ಜೀವನ ಸಾಗಿಸಿದ ಡಾ.ಜಿ.ಮಾದೇಗೌಡರು ತಮ್ಮ ಜೀವನವನ್ನು ಸಾರ್ವಜನಿಕರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದರು. ಅವರ ಜೀವನ ಚರಿತ್ರೆಯ ಪುಟಗಳನ್ನು ತೆರೆದಿಡುವ ಉದ್ದೇಶದಿಂದ ಮ್ಯೂಜಿಯಂ ಮಾಡುವ ಚಿಂತನೆಯಲ್ಲಿದ್ದೇವೆ ಎಂದು ತಿಳಿಸಿದರು.
ಗುರುದೇವರಹಳ್ಳಿ ಸಿದ್ದೇಗೌಡ, ಕಾರ್ಯಾಧ್ಯಕ್ಷ ಬಿ.ಬಸವರಾಜು, ಕೆ.ಎಸ್.ಗೌಡ, ಜಯರಾಮು, ಮುಟ್ಟನಹಳ್ಳಿ ಶಿವಲಿಂಗೇಗೌಡ, ಗ್ರಾಪಂ ಸದಸ್ಯ ಪುಟ್ಟರಾಮು, ಕೆ.ಟಿ.ಶ್ರೀನಿವಾಸ್, ಮಂಜುನಾಥ್, ಹಾಗಲಹಳ್ಳಿ ಬಸವರಾಜೇಗೌಡ, ಪುಟ್ಟಸ್ವಾಮೀಗೌಡ, ಸಿದ್ದಪ್ಪ, ಸ್ವರೂಪ್‌ಚಂದ್ರ, ಸ್ನಾತಕೋತ್ತರ ವಿಭಾಗದ ನಿರ್ದೇಶಕ ಎಸ್.ನಾಗರಾಜು, ಪ್ರಾಂಶುಪಾಲರಾದ ಪುಟ್ಟಸ್ವಾಮಿಗೌಡ, ಬಿ.ವಿ.ಮಲ್ಲಿಕಾರ್ಜುನ್, ಕಾಡುಕೊತ್ತನಹಳ್ಳಿ ಮಹದೇವು, ಕರಡಕೆರೆ ಚೌಡೇಗೌಡ, ಗೋಪನಹಳ್ಳಿ ಜಗದೀಶ್, ತೊರೆಚಾಕನಹಳ್ಳಿ ಶಂಕರೇಗೌಡ, ವಿವಿಧ ಅಂಗಸಂಸ್ಥೆ ಮುಖ್ಯಸ್ಥರು ಸೇರಿ ಹಲವರಿದ್ದರು.