ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಈ ವೇಳೆ ಮಾತನಾಡಿದ ಮಾಜಿ ಸಂಸದ ಮುನಿಸ್ವಾಮಿ, ಶಾಸಕ ನಾರಾಯಣಸ್ವಾಮಿಗೆ ಮಂತ್ರಿಗಿರಿ ಕೈ ತಪ್ಪಿರುವುದಕ್ಕೆ ಬಂಗಾರಪೇಟೆ ಜನರು ಕಾರಣರಲ್ಲ, ಜನರು ಅವರಿಗೆ ಮತ ನೀಡಿ ಶಾಸಕರನ್ನಾಗಿ ಮಾಡಿದ್ದಾರೆ. ಸಚಿವ ಸ್ಥಾನ ಕೊಡುವುದು ಬಿಡುವುದು ಅವರ ಪಕ್ಷಕ್ಕೆ ಸೇರಿದ್ದು, ಶಾಸಕರಿಗೆ ಅನ್ಯಾಯವಾಗಿದ್ದರೆ ತಮ್ಮ ಬೆಂಬಲಿಗರನ್ನು ಕರೆದುಕೊಂಡು ಹೋಗಿ ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಿ, ಅದು ಬಿಟ್ಟು ಮತ ನೀಡಿದ ತಪ್ಪಿಗೆ ವ್ಯಾಪಾರ ಸ್ಥಗಿತಗೊಳಿಸಿ ಬಂದ್ ಮಾಡುವುದರಿಂದ ವ್ಯಾಪಾರಿಗಳಿಗೆ ಏನು ಉಪಯೋಗ, ಜನಪ್ರತಿನಿಧಿ ಜನರಿಗೆ ಅನುಕೂಲ ಮಾಡಿಕೊಡಬೇಕು, ಅದು ಬಿಟ್ಟು ದೌರ್ಜನ್ಯದಿಂದ ತಮ್ಮ ಹಿಂಬಾಲಕರ ಮೂಲಕ ಬಲವಂತದಿಂದ ಬಂದ್ ಮಾಡಿಸಿರುವುದು ಸರಿಯಿಲ್ಲ, ಜನರು ಎಷ್ಟು ದಿನ ತುಘ್ ಲಕ್ ದರ್ಬಾರ್ ಸಹಿಸಿಕೊಂಡು ಇರುತ್ತಾರೆ, ಇದಕ್ಕೆ ಕೊನೆ ಕಾಣುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಂಗಾರಪೇಟೆ ತಾಲೂಕಿನಲ್ಲಿ ಮಳೆಯಿಲ್ಲದೆ ರೈತರು ಬರದಿಂದ ತತ್ತರಿಸಿ ಹೋಗಿದ್ದಾರೆ, ಆ ಕಡೆ ಗಮನಕೊಡದ ಶಾಸಕರು ಬಲವಂತವಾಗಿ ಪೊಲೀಸರನ್ನು ಬಳಸಿಕೊಂಡು ಅಂಗಡಿಗಳನ್ನು ಮುಚ್ಚಿಸಿ ಜನರಿಗೆ ತೊಂದರೆ ಕೊಡುವುದು ನಿಲ್ಲಿಸಬೇಕು, ಬಲವಂತದಿಂದ ಬಂದ್ ಮಾಡಿದ ಶಾಸಕರ ಹಿಂಬಾಲಕರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಬೇಕು ಎಂದು ಪಟ್ಟುಹಿಡಿದರು.ಬಂಗಾರಪೇಟೆ ಬಂದ್ ಮಾಡಲು ದೇಶಭಕ್ತರು, ಗಣ್ಯವ್ಯಕ್ತಿಗಳ್ಯಾರೂ ಸತ್ತಿಲ್ಲ. ಶಾಸಕರ ಒಡೆತನದ ರೆಸಾರ್ಟ್, ಬಾರ್ ಮತ್ತು ಹೋಟೆಲ್ ಮಾತ್ರ ತೆರೆದಿರಬೇಕು, ಬೇರೆಯವರ ಅಂಗಡಿ, ಹೋಟೆಲ್‌ಗಳು ಬಂದ್ ಆಗಿರಬೇಕಾ ಎಂದು ಪ್ರಶ್ನಿಸಿದರು.
ಬಳಿಕ ಪೊಲೀಸರು ಮುಚ್ಚಿರುವ ಅಂಗಡಿಗಳನ್ನು ತೆಗೆಸುವ ಕೆಲಸ ಮಾಡಿದರು. ಮಾಜಿ ಸಂಸದರ ಜೊತೆ ಪುರಸಭೆ ಮಾಜಿ ಸದಸ್ಯ ಕಪಾಲಿಶಂಕರ್, ಮುಖಂಡರಾದ ಜೀವನರೆಡ್ಡಿ, ಚೆನ್ನಕೇಶವ, ಶ್ರೀನಿವಾಸ್, ನಾರಾಯಣಸ್ವಾಮಿ, ಹೊಸರಾಯಪ್ಪ ಇತರರು ಇದ್ದರು.