ದೊಡ್ಡಬಳ್ಳಾಪುರ: ಬರ ಅಧ್ಯಯನಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಟನಕುಂಟೆ ಹಾಗೂ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳೂರು ಗ್ರಾಮದ ರೈತರ ಜಮೀನುಗಳಿಗೆ, ಕೋಳೂರು ಕೆರೆಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ಗುರುವಾರ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಪರಿಶೀಲನೆ ನಡೆಸಿದರು.
ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿರುವ ರಾಗಿಗೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಹಣದ ಕೊರತೆಯಿಲ್ಲ, ಆದಷ್ಟು ಶೀಘ್ರ ಹಣ ಬಿಡುಗಡೆ ಮಾಡಿ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಸಚಿವರು ತಿಳಿಸಿದರು
ಮುಂಗಾರು ಮಳೆ ಹಾಗೂ ಬೆಳೆ ಪರಿಸ್ಥಿತಿ:ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಬಿತ್ತನೆ ಕಾರ್ಯವು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ಜೂನ್ 1ರಿಂದ ಆಗಸ್ಟ್ 4 ರವರೆಗೆ ಜಿಲ್ಲೆಯ ವಾಡಿಕೆ ನೈಋತ್ಯ ಮುಂಗಾರು ಮಳೆಯ ಪ್ರಮಾಣ 306.6 ಮಿ.ಮೀ. ಆಗಿದ್ದು, ಪ್ರಸ್ತುತ 272.1 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಶೇ.11ರಷ್ಟು ಮಳೆ ಕೊರತೆ ಉಂಟಾಗಿದೆ.
ತಾಲೂಕಿನಲ್ಲಿ ವಿವಿಧ ವಿಧದ 2016 ಮೆಟ್ರಿಕ್ ಟನ್ ರಸಗೊಬ್ಬರಗಳು ಲಭ್ಯವಿದ್ದು, ರೈತರ ಅಗತ್ಯಕ್ಕೆ ತಕ್ಕಂತೆ ಸಮರ್ಪಕ ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ. ತಾಲೂಕಿನಲ್ಲಿ ಪ್ರಸ್ತುತ ಸುಮಾರು 87 ಸಾವಿರ ಟನ್ ಮೇವು ಲಭ್ಯವಿದ್ದು, ಇದು ಸುಮಾರು 39 ವಾರಗಳವರೆಗೆ ತಾಲೂಕಿನ ಜಾನುವಾರುಗಳ ಮೇವಿನ ಅಗತ್ಯವನ್ನು ಪೂರೈಸುವಷ್ಟು ಸಾಕಾಗಿರುತ್ತದೆ ಎಂದರು.
6ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಚಿವ ಕೆ.ಎಚ್.ಮುನಿಯಪ್ಪ, ಬರ ಪರಿಸ್ಥಿತಿ ಅಧ್ಯಯನ ನಡೆಸಿದರು. ಶಾಸಕ ಧೀರಜ್ ಮುನಿರಾಜ್, ಜಿಲ್ಲಾಧಿಕಾರಿ ಅನುರಾಧಾ ಮತ್ತಿತರರು ಇದ್ದಾರೆ.