ಕನ್ನಡಪ್ರಭ ವಾರ್ತೆ ತುಮಕೂರುಮಾಜಿ ಪ್ರಧಾನಿ ಜವಹರಲಾಲ್ ನೆಹರು ಶ್ರೀಮಂತ ಮನೆತನದಲ್ಲಿ ಹುಟ್ಟಿ ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಪಂಚದ ಹಲವು ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದರು. ತಮ್ಮ ಹಲವಾರು ಯೋಜನೆಗಳ ಮೂಲಕ ಅಧುನಿಕ ಭಾರತವನ್ನು ಸದೃಢವಾಗಿ ಕಟ್ಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ ಲಭಿಸಿದಾಗ ಒಂದು ಗುಂಡು ಸೂಜಿಗೂ ವಿದೇಶದ ಮೇಲೆ ಅವಲಂಬಿತವಾಗಬೇಕಿತ್ತು. ಕೃಷಿ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನದ ಮೂಲಕ ದೇಶವನ್ನು ಬಲಿಷ್ಠವಾಗಿ ಕಟ್ಟಲು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದರು. ಜನರಿಗೆ ಅನ್ನ, ಬಟ್ಟೆ, ಇರಲು ಸೂರು ನೀಡುವ ಮಹತ್ವದ ಯೋಜನೆಗಳನ್ನು ನೆಹರು ರೂಪಿಸಿದ್ದರು. ನೆಹರು ಈ ದೇಶದಲ್ಲಿ ಜಮೀನುದಾರರಿಗೆ, ತೆರಿಗೆದಾರ, ಪದವಿಧರರಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು, ಅಂಬೇಡ್ಕರ್ ಅವರ ಕೋರಿಕೆಯಂತೆ ಎಲ್ಲಾ ಜನಸಾಮಾನ್ಯರಿಗೂ ವಿಸ್ತರಿಸಿದರು ಎಂದರು.ಮುಖಂಡ ಷಣ್ಮುಖಪ್ಪ ಮಾತನಾಡಿ, ಇಂದು ಭಾರತ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಮಾನವ ಸಂಪನ್ಮೂಲವನ್ನು ಪಡೆದಿದ್ದರೆ ಅದಕ್ಕೆ ನೆಹರು ಅವರು ರೂಪಿಸಿದ ಯೋಜನೆಗಳ ಕಾರಣವಾಗಿವೆ. ಹತ್ತಾರು ಐಐಟಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೂಲಕ ಜನರಿಗೆ ಜಗತ್ತಿನ ಜ್ಞಾನ ದೊರೆಯುವಂತೆ ಮಾಡಿದರು. ಇದರ ಫಲವಾಗಿ ಇಂದು ಇಡೀ ವಿಶ್ವದಲ್ಲಿಯೇ ಭಾರತದ ಡಾಕ್ಟರ್, ಇಂಜಿನಿಯರ್ ಕಾಣಬಹುದು. ಕೈಗಾರಿಕೆಗಳ ಮೂಲಕ ದುಡಿಯುವ ವರ್ಗಕ್ಕೆ ಉದ್ಯೋಗ ನೀಡಿದ ನೆಹರು, ಭಾರತವನ್ನು ಜಗತ್ತಿನಲ್ಲಿಯೇ ಅಭಿವೃದ್ದಿಶೀಲ ರಾಷ್ಟ್ರವಾಗಿ ರೂಪಿಸಿದ್ದರು ಎಂದು ಹೇಳಿದರು.ಮುಖಂಡ ನಟರಾಜ ಶೆಟ್ಟಿ ಮಾತನಾಡಿ, ಚಾಚಾ ನೆಹರು ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಶಾಲೆಗಳಲ್ಲಿ ಮಕ್ಕಳಿಗೆ ವೇಷ, ಭೂಷಣ ಸ್ಪರ್ಧೆಗಳಲ್ಲಿ ಹೆಚ್ಚು ಜನರು ನೆಹರು ಅವರ ವೇಷ ಧರಿಸುತಿದ್ದ ಕಾಲವೊಂದಿತ್ತು. ತಮಗೆ ಪ್ರಿತಾರ್ಜಿತವಾಗಿ ಬಂದ ಅಂದೇ ನೂರಾರು ಕೋಟಿ ಬೆಲೆ ಬಾಳುವ ತ್ರಿಮೂರ್ತಿ ಭವನವನ್ನು ಸರ್ಕಾರಕ್ಕೆ ದಾನ ನೀಡಿ, ಜನಸಾಮಾನ್ಯರಂತೆ ಬದುಕಿದ ನೆಹರು, ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಯಾಜ್, ಮಹೇಶ್, ಮುಖಂಡರಾದ ಸಿಮೆಂಟ್ ಮಂಜುನಾಥ್, ಕೆಂಪರಾಜು, ಸಂಜೀವಕುಮಾರ್, ಸುಜಾತ, ನಾಗಮಣಿ, ಮುಬೀನ, ಶಿವಾಜಿ, ನ್ಯಾತೇಗೌಡ, ಕೆಂಪಣ್ಣ, ಶ್ರೀನಿವಾಸ್ ಆದಿಲ್ ಉಪಸ್ಥಿತರಿದ್ದರು.