- ದಕ್ಷಿಣ ಕ್ಷೇತ್ರದ ಬಗ್ಗೆ ಹೇಳಿಕೆಯಲ್ಲ, ಕೆಲಸಗಳಾಗಲಿ ಎಂದು ಶಾಸಕರಿಗೆ ಎಸ್‌ಡಿಪಿಐ ಸಲಹೆ - - -
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ ಘೋಷಣೆ ಮಾಡಿರುವ ₹100 ಕೋಟಿ ಅನುದಾನಕ್ಕೆ ಪೂರಕ ಕ್ರಿಯಾಯೋಜನೆ ರೂಪಿಸಿ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸದ್ಬಳಕೆ ಮಾಡಿಕೊಳ್ಳುವಂತೆ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಶಾಸಕ ಸಮರ್ಥ ಎಂ.ಶಾಮನೂರು ಅವರಿಗೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಶಾಸಕರು ಈಚೆಗೆ ಕ್ಷೇತ್ರದ ವಿವಿಧ ಶಾಲೆಗಳಿಗೆ ಭೇಟಿ ನೀಡುತ್ತಿರುವುದು, ಚರಂಡಿಗಳು, ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳಿಕೆ ನೀಡುತ್ತಿರುವುದನ್ನು ತಾವು ಗಮನಿಸಿದ್ದು, ಹೇಳಿಕೆಗಳಿಂದ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ, ಕೆಲಸ ಆಗಬೇಕು ಎಂದರು.ಸರ್ಕಾರ ಘೋಷಿಸಿರುವ ₹100 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಿ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಕೆಲಸ ಮಾಡಲಿ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸದ್ಬಳಕೆಯಾಗಲಿ. ಇಲ್ಲದಿದ್ದರೆ, ಬಂದ ಅನುದಾನವೂ ಸರ್ಕಾರಕ್ಕೆ ವಾಪಸಾಗುತ್ತದೆ. ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವ, ಕ್ಷೇತ್ರದಲ್ಲಿ ಮಲ್ಟಿ ಸ್ಪೆಷ್ಟಾಲಟಿ ಆಸ್ಪತ್ರೆ ಮಾಡಿ, ಜನರಿಗೆ ಅನುಕೂಲವಾಗುವ ಕೆಲಸ ಮಾಡುವಂತೆ ಅವರು ಹೇಳಿದರು.
- - -
* ಸಾಮಾಜಿಕ ಭದ್ರತಾ ಪಿಂಚಣಿ ಆದಾಯ ಮಿತಿ ಹೆಚ್ಚಳಕ್ಕೆ ಸ್ವಾಗತ
ದಾವಣಗೆರೆ: ಸಾಮಾಜಿಕ ಭದ್ರತಾ ಪಿಂಚಣಿ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸಿದ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ರಾಜ್ಯ ಸರ್ಕಾರದ ಮುಂದೆ ಎಸ್‌ಡಿಪಿಐ ನಿರಂತರ ಒತ್ತಾಯಿಸುತ್ತಿದ್ದ ಪ್ರಮುಖ ಬೇಡಿಕೆಗೆ ಸ್ಪಂದನೆ ಸಿಕ್ಕಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಿಳಿಸಿದರು.
ಕಡಿಮೆ ಆದಾಯ ಮಿತಿ ಕಾರಣಕ್ಕೆ ಪಿಂಚಣಿ ಸೌಲಭ್ಯ ವಂಚಿತರಾಗಿದ್ದ ಸುಮಾರು 2 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರೀಕರು, ವಿಧವೆಯರು, ವಿಕಲಚೇತನರು, ಇತರೆ ದುರ್ಬಲ ವರ್ಗಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಈಚೆಗೆ ಎಸ್‌ಡಿಪಿಐ ಕರ್ನಾಟಕವು ₹32 ಸಾವಿರ ವಾರ್ಷಿಕ ಆದಾಯ ಮಿತಿಯಿಂದಾಗಿ ಈಗಿನ ಜೀವನ ವೆಚ್ಚಕ್ಕೆ ಯಾವುದೇ ರೀತಿ ಹೊಂದಿಕೆ ಆಗುವುದಿಲ್ಲ ಎಂದು ಸರ್ಕಾರದ ಗಮನಕ್ಕೆ ತಂದಿತ್ತು. ಸಾಮಾಜಿಕ ಭದ್ರತಾ ಪಿಂಚಣಿಗೆ ಬಿಪಿಎಲ್ ಮಾನದಂಡ ಅನ್ವಯಿಸಬೇಕು. ಸರ್ಕಾರ ಆದರೆ, ಸಾಮಾಜಿಕ ಭದ್ರತಾ ಪಿಂಚಣಿಗೆ ಪ್ರತ್ಯೇಕ ಆದಾಯ ಮಿತಿ ನಿಗದಿಪಡಿಸುವ ಬದಲು ಬಿಪಿಎಲ್ ಕಾರ್ಡ್ ಅಥವಾ ಆರ್ಥಿಕವಾಗಿ ದುರ್ಬಲ ಕುಟುಂಬವೆಂಬ ಮಾನದಂಡವನ್ನೇ ಅರ್ಹತೆ ಆಧಾರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎ.ಆರ್.ತಾಹೀರ್, ಉಪಾಧ್ಯಕ್ಷ ರಿಯಾಜ್ ರಿಜ್ವಿ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್, ನವೀದ್ ಅಹಮ್ಮದ್, ಅಮೀರ್, ಖುಬೈಬ್, ಯಾಹಿಯಾ, ಜಬೀವುಲ್ಲಾ, ಉಬೇದು ಇತರರು ಇದ್ದರು.
-20ಕೆಡಿವಿಜಿ7: ದಾವಣಗೆರೆಯಲ್ಲಿ ಶುಕ್ರವಾರ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.