ಕನ್ನಡಪ್ರಭ ವಾರ್ತೆ ಉಡುಪಿ
ಸಮಾರಂಭವನ್ನು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉದ್ಘಾಟಿಸಿದರು.
ಡಾ. ಕೋಟ ಶಿವರಾಮ ಕಾರಂತ ದತ್ತಿ ಉಪನ್ಯಾಸ ನೀಡಿದ ಸಾಹಿತಿ ಡಾ. ನಿಕೇತನ, ಕಾರಂತರ ಕೃತಿಗಳು ಓದುಗರನ್ನು ಸಹೃದಯಿಗಳನ್ನಾಗಿ ಮಾಡುತ್ತದೆ. ವೈಚಾರಿಕ ದೃಷ್ಟಿಕೋನ ಬೆಳೆಸುತ್ತದೆ. ಪದವೀಧರರು ವಿದ್ಯಾವಂತರೆನಿಸಿಕೊಳ್ಳುವುದಿಲ್ಲ. ವಿದ್ಯೆಯ ಜೊತೆಗೆ ವಿವೇಕ ಮೂಡಲು ಸಾಹಿತ್ಯ ಓದಬೇಕು. ಬದುಕನ್ನು ಸಂಭ್ರಮಿಸಬೇಕಾದರೆ ವರ್ತಮಾನದಲ್ಲಿ ಜೀವಿಸಬೇಕು. ಇದರಿಂದ ವ್ಯಕ್ತಿ ಶಕ್ತಿಯಾಗಲು ಸಾಧ್ಯ. ಸಣ್ಣ ವಿಷಯಗಳಿಗೆ ಆತ್ಮಹತ್ಯೆಗೆ ಮುಂದಾಗುವ ಎಳೆ ಮನಸ್ಸುಗಳು ಕಾರಂತರ ಕೃತಿಗಳನ್ನು ಓದಿದರೆ ಅಂಥ ಆಲೋಚನೆಗಳೇ ಹುಟ್ಟುಕೊಳ್ಳುವುದಿಲ್ಲ. ಬದುಕಿನ ಅನನ್ಯತೆ ಅರಿವಾಗುತ್ತದೆ ಎಂದು ಹೇಳಿದರು.ಜೀವನಕ್ಕಾಗಿ ಆಯುರ್ವೇದ ಈ ವಿಷಯವಾಗಿ ಜಿಲ್ಲಾ ಆಯುಷ್ ಆಸ್ಪತ್ರೆಯ ತಜ್ಞ ವೈದ್ಯೆ ಡಾ .ಸ್ವಾತಿ ಶೇಟ್ ಮಾತನಾಡಿ, ಉತ್ತಮ ಆರೋಗ್ಯಕರ ಜೀವನಕ್ಕೆ ಆಯುರ್ವೇದ ಪದ್ಧತಿ ಅತಿ ಅಗತ್ಯ. ದಿನನಿತ್ಯ ಜೀವನದಲ್ಲಿ ಪೌಷ್ಟಿಕವಾದ ಆಹಾರವನ್ನು ಹಿತಮಿತದಲ್ಲಿ ಸೇವಿಸುವುದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣೈ, ಕಸಾಪ ಬೈಂದೂರು ತಾಲೂಕು ಅಧ್ಯಕ್ಷ ಡಾ. ರಘು ನಾಯ್ಕ, ತಾಲೂಕು ಕಾರ್ಯದರ್ಶಿ ರಂಜಿನಿ ವಸಂತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿದರು. ಜಿಲ್ಲಾ ಘಟಕದ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ವಂದಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.