ಹೊಸಪೇಟೆ: ಇಲ್ಲಿನ ಆರ್ಯವೈಶ್ಯ ಸಂಘದಿಂದ ನಗರದಲ್ಲಿ ವಾಸವಿ ಜಯಂತಿಯನ್ನು ಭಾನುವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.
ವಾಸವಿ ಮಾತೆಗೆ ತುಲಾಭಾರ ಸೇವೆ, ಕನ್ನಿಕಾ ಪೂಜೆ ಹಾಗೂ ಹಾಗೂ ಧಾರ್ಮಿಕ ಸಭೆ ನಡೆಯಿತು. ದಾನಿಗಳು ಹಾಗೂ ವಿವಿಧ ಬಗೆಯಲ್ಲಿ ಸೇವೆ ಸಲ್ಲಿಸಿದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಂಪಿ ರಸ್ತೆಯ ಮಲ್ಲಿಗೆ ಹೋಟೆಲ್‌ಗೆ ತಿರುವಿನ ಸ್ಥಳದಲ್ಲಿ ವಾಸವಿ ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಸಂಘದ ಅಧ್ಯಕ್ಷ ಕಾಕುಬಾಳು ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ್ ಭೂಪಾಳ್, ನಗರಸಭೆ ಮಾಜಿ ಉಪಾಧ್ಯಕ್ಷ ರಮೇಶ್ ಗುಪ್ತ ಹಾಗೂ ಇತರ ಸಮಾಜದ ಮುಖಂಡರು ವಾಸವಿ ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.ವೃತ್ತಕ್ಕೆ ಹೆಸರು ಇಡಲು ಕಾರಣಿಕರ್ತರಾದ ನಗರಸಭಾ ಸದಸ್ಯ ರಮೇಶ್ ಗುಪ್ತ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ನಂತರ ಆರ್ಯವೈಶ್ಯ ಸಂಘವು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆಸಿದ ರಕ್ತದಾನ ಶಿಬಿರದಲ್ಲಿ 38 ಜನರು ರಕ್ತದಾನ ನೀಡಿದರು. ಸಂಜೆ ವಾಸವಿ ದೇವಿಯ ಭವ್ಯ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಆರ್ಯವೈಶ್ಯ ಸಮಾಜದ ಮುಖಂಡರು, ಸಮಾಜದ ಪದಾಧಿಕಾರಿಗಳು, ವಾಸವಿ ಮಹಿಳಾ ಮಂಡಳಿಯ ಸದಸ್ಯರು ಸೇರಿದಂತೆ ಆರ್ಯವೈಶ್ಯ ಸಮಾಜದ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಹೊಸಪೇಟೆಯಲ್ಲಿ ಭಾನುವಾರ ಆರ್ಯವೈಶ್ಯ ಸಮಾಜದಿಂದ ವಾಸವಿ ಜಯಂತಿಯ ಅಂಗವಾಗಿ ನಗರೇಶ್ವರ ದೇವಸ್ಥಾನದ ವಾಸವಿ ಮಾತೆಗೆ ವಿಶೇಷ ಹೂವಿನಿಂದ ಅಲಂಕಾರಗೊಳಿಸಲಾಗಿತ್ತು.