ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಈವರೆಗೂ ನಾಲ್ವರ ಶವ ಪತ್ತೆಯಾಗಿಲ್ಲ. ಸದ್ಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರ ಪತ್ತೆಗೆ ತೀವ್ರ ಕ್ರಮ ಕೈಗೊಂಡಿದ್ದಾರೆ.
ಅರೆಬಳಚಿ ಗ್ರಾಮದ ನೀಲಾಬಾಯಿ (50), ಮಗ ರವಿಕುಮಾರ್ (23), ಮಗಳು ಶ್ವೇತಾ (24) ಮತ್ತು ಅಳಿಯ ಪರಶುರಾಮ (28) ನೀರು ಪಾಲಾದ ದುರ್ದೈವಿಗಳು.ಘಟನೆ ವಿವರ:
ಅರಬಿಳಚಿ ಗ್ರಾಮದ ನೀಲಾಬಾಯಿ ಮಗಳಾದ ಶ್ವೇತಾ ಅವರನ್ನು ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಪರಶುರಾಮ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.
ಅರಬಿಳಚಿ ಗ್ರಾಮದಲ್ಲಿ ಜ.12 ರಿಂದ 16ರವರೆಗೆ ಮಾರಿಕಾಂಬ ಜಾತ್ರಾಮಹೋತ್ಸವ ಅದ್ದೂರಿಯಾಗಿ ಜರುಗಿದ್ದು, ಈ ಹಬ್ಬಕ್ಕಾಗಿ ಮಗಳು ಶ್ವೇತಾ ತಮ್ಮ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ತವರಿಗೆ ಆಗಮಿಸಿದ್ದರು. ಮನೆಗೆ ಹೆಚ್ಚು ಜನ ನೆಂಟರು ಆಗಮಿಸಿದ್ದರಿಂದ ಈ ಕುಟುಂಬ ಬಟ್ಟೆ ತೊಳೆಯಲೆಂದು ನಾಲೆಗೆ ಬಂದಿದ್ದರು.ನಾಲೆಯ ದಡದಲ್ಲಿ ಬಟ್ಟೆ ಹಾಗೂ ಎರಡು ಬೈಕ್ ಗಳನ್ನು ಕಂಡ ಸ್ಥಳೀಯರು ಸ್ಥಳದಲ್ಲಿ ಯಾರೂ ಇಲ್ಲದ್ದರಿಂದ ಅನುಮಾನಗೊಂಡು ಪಟ್ಟಣದ ಠಾಣೆಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿದ್ದಾರೆ. ಬೈಕ್ ಸಂಖ್ಯೆ ಆಧಾರದಲ್ಲಿ ಸಂಪರ್ಕಿಸಿದಾಗ ನಾಲೆಗೆ ಬಂದವರ ಮಾಹಿತಿ ದೊರಕಿದೆ.
ಡಿವೈಎಸ್ಪಿ ಕಾರ್ಯಪ್ಪನವರ ನೇತೃತ್ವದಲ್ಲಿ ಪಿಐ ಶಿವಪ್ರಸಾದ್, ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ.