ಆಧುನಿಕ ಭಾರತಕ್ಕೆ ನಾಲ್ವಡಿ ಆಡಳಿತ ಮಾದರಿ: ಡಾ.ನಿಂಗರಾಜ್‌ಗೌಡ

KannadaprabhaNewsNetwork |  
Published : Jun 01, 2025, 11:48 PM ISTUpdated : Jun 01, 2025, 11:49 PM IST
೧ಕೆಎಂಎನ್‌ಡಿ-೩ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಮಾತನಾಡಿದರು. | Kannada Prabha

ಸಾರಾಂಶ

ನಾಲ್ವಡಿ ಅವರ ಆಡಳಿತವನ್ನು ಮೈಸೂರಿನ ಸುವರ್ಣಯುಗ ಎಂದು ಕರೆಯಲಾಗುತ್ತದೆ. ಅವರು ಮಹಿಳಾ ಶಿಕ್ಷಣ, ದಲಿತರ ಉನ್ನತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ಅಭಿವೃದ್ಧಿ ಮತ್ತು ಸಾಮಾಜಿಕ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದರು. ಅವರು ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರಾಗಿದ್ದು, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವು ಆಧುನಿಕ ಭಾರತಕ್ಕೆ ಮಾದರಿಯಾಗಿದೆ. ಅರಸರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನ ಸುವರ್ಣಯುಗವನ್ನು ಕಂಡಿತು ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ತಿಳಿಸಿದರು.

ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ವತಿಯಿಂದ ಭಾನುವಾರ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಾಲ್ವಡಿ ಅವರ ಆಡಳಿತವನ್ನು ಮೈಸೂರಿನ ಸುವರ್ಣಯುಗ ಎಂದು ಕರೆಯಲಾಗುತ್ತದೆ. ಅವರು ಮಹಿಳಾ ಶಿಕ್ಷಣ, ದಲಿತರ ಉನ್ನತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ಅಭಿವೃದ್ಧಿ ಮತ್ತು ಸಾಮಾಜಿಕ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದರು. ಅವರು ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರಾಗಿದ್ದು, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ್ನು ಸ್ಥಾಪಿಸಲು ೩೭೧ ಎಕರೆ ಭೂಮಿ ದಾನವಾಗಿ ನೀಡಿದರು. ಬೆಂಗಳೂರಿನಲ್ಲಿ ಹೆಚ್‌ಎಎಲ್ ಸ್ಥಾಪಿಸಲು ನೆರವಾದರು ಎಂದು ಶ್ಲಾಘಿಸಿದರು.

ಮೈಸೂರು ರಾಜ್ಯ ಏಷ್ಯಾದಲ್ಲಿ ಮೊದಲ ಹೈಡ್ರೋಎಲೆಕ್ಟ್ರಿಕ್ ವಿದ್ಯುತ್ ಉತ್ಪಾದನೆ ಮಾಡಿದ ರಾಜ್ಯವಾಗಿದ್ದು, ಬೆಂಗಳೂರು ಮೊದಲ ಏಷ್ಯನ್ ನಗರವಾಗಿ ಬೀದಿ ದೀಪಗಳನ್ನು ಹೊಂದಿತು. ಅವರ ಆಡಳಿತವನ್ನು ನೋಡಿ ಮಹಾತ್ಮ ಗಾಂಧೀಜಿ ಒಡೆಯರ್ ಅವರಿಗೆ ರಾಜರ್ಷಿ ಎಂದು ಕರೆದರು. ಲಾರ್ಡ್ ಸ್ಯಾಂಕಿ ಅವರು ಮೈಸೂರು ವಿಶ್ವದ ಅತ್ಯುತ್ತಮ ಆಡಳಿತ ರಾಜ್ಯ ಎಂದು ಪ್ರಶಂಸಿಸಿದ್ದಾಗಿ ತಿಳಿಸಿದರು.

ನಾಲ್ವಡಿ ಕೊಡುಗೆ ಪಠ್ಯ ಪುಸ್ತಕದಲ್ಲಿ ಇಲ್ಲದಿರುವುದು ಶೋಚನೀಯ. ಇಂತಹ ಮಹನೀಯರ ಸಾಧನೆಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿ ಇಂದಿನ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಇದರಿಂದ ನಾಲ್ವಡಿಯಂತಹವರ ಬದುಕು, ಸಾಧನೆ ಇಂದಿನ ಮಕ್ಕಳ ಬದುಕಿಗೆ ದಾರಿದೀಪವಾಗಲಿದೆ. ಈಗಲಾದರೂ ಕೇಂದ್ರ, ರಾಜ್ಯ ಸರ್ಕಾರ ಪಠ್ಯದಲ್ಲಿ ನಾಲ್ವಡಿ ಹಾಗೂ ಹಲವು ಮಹನೀಯರ ಜೀವನಗಾಥೆಯನ್ನು ಪುಸ್ತಕದ ಮೂಲಕ ಹೊರತರಲಿ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ದೇಶಕ್ಕೆ ಮಾದರಿ. ಅವರ ಆಡಳಿತ, ಸಾಮಾಜಿಕ ಸೇವೆ ಅನನ್ಯವಾದದ್ದು. ಜನರ ಸಮಸ್ಯೆಗಳನ್ನು ಬಗ್ಗೆ ಅವರಿಗೆ ಅರಿವಿತ್ತು. ನಾಲ್ವಡಿಯವರಿಂದಲೇ ಮಂಡ್ಯ ಜಿಲ್ಲೆ ಶ್ರೀಮಂತವಾಗಿ ಸಮೃದ್ದಿಯಾಗಿದೆ. ಇದಕ್ಕೆ ನಾಲ್ವಡಿ ಅವರ ಕೊಡುಗೆ ಕಾರಣ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆ ಪರಿಗಣಿಸಿ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸುವಂತೆ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜ್ ಗೌಡ ಒತ್ತಾಯಿಸಿ, ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಂಡರು.

ವಿವಿಧ ಕ್ಷೇತ್ರದ ಸಾಧನೆಗೈದ ಬಿ.ಸುನೀಲ್‌ಕುಮಾರ್, ಎಲ್.ಬಿ.ಮಂಜುನಾಥ್, ಮೀನಕೆರೆ ಆಂಜನಪ್ಪ, ಆರ್.ಭರಣಿ, ಡಾ.ನಾಗೇಶ್, ಎಂ.ಬಾಬು, ಸುಖಾನಂದಶೆಟ್ಟಿ, ಪಿ.ಎನ್.ಶ್ರೀನಾಥ್, ರಾಮಕೃಷ್ಣಯ್ಯ, ಎಚ್.ಟಿ.ಪಾರ್ವತಮ್ಮ, ಸಿರಿಗಂಧ ರಾಮಕೃಷ್ಣ, ಡಾ.ಶ್ರೀಧರ್ ಹೆಗಡೆ, ಕೆ.ಎನ್.ರಾಮು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ವೈದ್ಯ ಡಾ.ಚಂದ್ರಶೇಖರ್, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಚಿನ್ನಸ್ವಾಮಿ ಸೋಸಲೆ, ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಪದಾಧಿಕಾರಿಗಳಾದ ಮಂಗಲ ಶಿವಣ್ಣ, ನಾಗೇಶ್ ರಾಗಿಮುದ್ದನಹಳ್ಳಿ, ರೂಪ ಹೊಸಹಳ್ಳಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''