ಆರ್‌ಟಿಪಿಎಸ್‌ನ ನಾಲ್ಕು ಘಟಕಗಳು ಬಂದ್

KannadaprabhaNewsNetwork |  
Published : Nov 14, 2026, 01:30 AM IST
13ಕೆಪಿಆರ್‌ಸಿಆರ್04:  | Kannada Prabha

ಸಾರಾಂಶ

ಸಿಗೆ, ಬರಗಾಲ, ಮಳೆ ಕೊರತೆಯ ನಡುವೆಯೂ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಿ ತನ್ನದೇ ಕೊಡುಗೆಯನ್ನು ನೀಡುತ್ತಾ ಬರುತ್ತಿರುವ ಇಲ್ಲಿನ ರಾಯಚೂರು ಬೃಹತ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ಆರ್‌ಟಿಪಿಎಸ್) ನಾಲ್ಕು ಘಟಕಗಳು ವಿವಿಧ ಕಾರಣಗಳಿಂದಾಗಿ ಕರೆಂಟ್‌ ಉತ್ಪಾದನೆಯನ್ನು ನಿಲ್ಲಿಸಿವೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಬೇಸಿಗೆ, ಬರಗಾಲ, ಮಳೆ ಕೊರತೆಯ ನಡುವೆಯೂ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಿ ತನ್ನದೇ ಕೊಡುಗೆಯನ್ನು ನೀಡುತ್ತಾ ಬರುತ್ತಿರುವ ಇಲ್ಲಿನ ರಾಯಚೂರು ಬೃಹತ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ಆರ್‌ಟಿಪಿಎಸ್) ನಾಲ್ಕು ಘಟಕಗಳು ವಿವಿಧ ಕಾರಣಗಳಿಂದಾಗಿ ಕರೆಂಟ್‌ ಉತ್ಪಾದನೆಯನ್ನು ನಿಲ್ಲಿಸಿವೆ.

ಆರ್‌ ಟಿಪಿಎಸ್ ಎಂಟು ಘಟಕಗಳ ಪೈಕಿ 1ರಿಂದ 3 ಮತ್ತು 7ನೇ ಘಟಕಗಳು ಬಂದಾಗಿದ್ದು, ಉಳಿದ 4ರಿಂದ 6 ಮತ್ತು 8ನೇ ಘಟಕಗಳಿಂದ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಅದೇ ರೀತಿ ಯರಮರಸ್‌ಆತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್ (ವೈಟಿ ಪಿಎಸ್‌) ಸ್ಥಾವರದ ಎರಡೂ ಮತ್ತು ಪಕ್ಕದ ಬಳ್ಳಾರಿಯ ವೈಟಿಪಿಎಸ್‌ನ ಮೂರರ ಪೈಕಿ ಎರಡು ಘಟಕಗಳಿಂದ ಕರೆಂಟ್ ಉತ್ಪಾದಿಸಲಾಗುತ್ತಿದೆ.

ನಾಲ್ಕು ಘಟಕಗಳ ಬಂದ್‌ ಗೆ ಏನು ಕಾರಣ: 1720 ಮೆಗಾ ವ್ಯಾಟ್ ಸಾಮರ್ಥ್ಯದ ಆರ್‌ಟಿಪಿಎಸ್‌ನ ಎಂಟು ಘಟಕಗಳ ಪೈಕಿ 210 ಮೆಗಾ ವ್ಯಾಟ್ ಸಾಮರ್ಥ್ಯದ1ನೇ ಘಟಕ ನಾಲ್ಕು ದಶಕಗಳಾಗಿದ್ದರಿಂದ ಕಳೆದ ಎರಡು ವರ್ಷಗಳಿಂದ ಪೂರ್ಣ ಪ್ರಮಾಣ ದಲ್ಲಿ ಸ್ಥಗಿತಗೊಂಡಿದೆ. 2ನೇ ಘಟಕವು ಹಳೆಯದ್ದಾಗಿದ್ದರಿಂದ ಸುದೀರ್ಘ ಕಾಲದ ದುರಸ್ತಿಯನ್ನು ಕೈಗೊಳ್ಳಲಾಗಿದೆ. ಇನ್ನು 3 ನೇ ಮತ್ತು 7 ನೇ ಘಟಕಗಳ ಕುದಿಸುವ ಕೊಳವೆ ( ಬಾಯ್ಲರ್‌ ಟ್ಯೂಬ್ ) ಸೋರಿಕೆಯಿಂದಾಗಿ ಗುರುವಾರ ಘಟಕ ಗಳನ್ನು ಬಂದ್‌ ಮಾಡಲಾಗಿದೆ. ಬಾಯ್ಲರ್ ಒಳಗೆ ನೀರು ಅಥವಾ ಆವಿಯನ್ನು ಸಾಗಿಸಲು ಬಳಸುವ ವಿಶೇಷ ಲೋಹದ ಕೊಳವೆಗಳಿವು. ಕುಲುಮೆಯಲ್ಲಿ ಉಂಟಾಗುವ ತೀವ್ರವಾದ ಶಾಖವನ್ನು ನೀರಿಗೆ ವರ್ಗಾಯಿಸಿ ಉಗಿ ತಯಾರಿಸಲು ಈ ಬಾಯ್ಲರ್‌ ಕೊಳವೆಗಳು ಸಹಾಯ ಮಾಡುತ್ತವೆ. 3 ಮತ್ತು 7 ನೇ ಘಟಕದ ಬಾಯ್ಲರ್‌ ಕೊಳವೆಗಳು ಸೋರಿಕೆಯಿಂದಾಗಿ ಘಟಕಗಳನ್ನು ಸ್ಥಗಿತ ಮಾಡಲಾಗಿದೆ.

ಉಳಿದ ಘಟಕಗಳಿಂದ ಉತ್ಪಾದನೆ : ಆರ್‌ ಟಿಪಿಎಸ್‌ ನ 210 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿರುವ 4 ನೇ ಘಟಕದಿಂದ 167 ಮೆಗಾ ವ್ಯಾಟ್, 5 ನೇ ಘಟಕದಿಂದ 139 ಮತ್ತು 6 ನೇ ಘಟಕದಿಂದ 182 ಹಾಗೂ 250 ಮೆಗಾ ವ್ಯಾಟ್ ಸಾಮರ್ಥ್ಯದ 8 ನೇ ಘಟಕದಿಂದ 232 ಮೆಗಾ ವ್ಯಾಟ್ ಸೇರಿ ಒಟ್ಟಾರೆ 710 ಮೆಗಾ ವ್ಯಾಟ್‌ಕರೆಂಟ್ ಉತ್ಪಾದಿಸಲಾಗುತ್ತಿದೆ. ತಲಾ 800 ಸೇರಿ ಒಟ್ಟಾರೆ 1600 ಮೆಗಾ ವ್ಯಾಟ್ ಸಾಮರ್ಥ್ಯದ ವೈಟಿಪಿಎಸ್‌ನ ಎರಡೂ ಘಟಕಗಳಿಂದ ಕ್ರಮವಾಗಿ 464 ಮತ್ತು 566 ಸೇರಿ ದಂತೆ ಒಟ್ಟಾರೆ 1019 ಮೆಗಾ ವ್ಯಾಟ್. ಇನ್ನು ಪಕ್ಕದ 1700 ಮೆಗಾ ವ್ಯಾಟ್‌ಸಾಮರ್ಥ್ಯದ ಬಿಟಿಪಿಎಸ್‌ನ ಮೂರರ ಪೈಕಿ 1 ನೇ ಘಟಕವು ತಾಂತ್ರಿಕ ದೋಷದಿಂದ ಉತ್ಪಾದನಾ ಕಾರ್ಯವನ್ನು ನಿಲ್ಲಿಸಿದ್ದು, ಉಳಿದಂತೆ 2 ನೇ ಘಟಕದಿಂದ 366 ಮತ್ತು 3 ನೇ ಘಟಕದಿಂದ 530 ಸೇರಿ ಒಟ್ಟು 886 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸಲಾಗುತ್ತಿದೆ. ಹೀಗೆ ಕಲ್ಲಿದ್ದಲು ಆಧರಿತ ಈ ಭಾಗದ ಮೂರು ಶಾಖೋತ್ಪನ್ನ ವಿದ್ಯುತ್ವಿದ್ಯುತ್ ಕೇಂದ್ರಗಳಿಂದ ಒಟ್ಟಾರೆ ಸುಮಾರ 2,619 ಮೆಗಾ ವ್ಯಾಟ್‌ವಿದ್ಯುತ್ ಉತ್ಪಾದಿಸಿ ರಾಜ್ಯಜಾಲಕ್ಕೆ ರವಾನಿಸಲಾಗುತ್ತಿದೆ.

ದುರಸ್ತಿ ಕಾರ್ಯ ಶುರು: ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಕೇಂದ್ರಗಳನ್ನು ಸಾಮರ್ಥ್ಯಕ್ಕನುಗುಣ ಸುಸ್ಥಿರವಾಗಿ ಚಲಾಯಿಸಬೇಕು, ರಾಜ್ಯದಲ್ಲಿ ಉಂಟಾಗುತ್ತಿರುವ ವಿದ್ಯುತ್‌ ಬಳಕೆಯ ಬೇಡಿಕೆ, ಉತ್ಪಾದನೆ ಹಾಗೂ ಪೂರೈಕೆಗಳಲ್ಲಿನ ಏರುಪೇರು ಮತ್ತು ಅನ್ಯ ಮೂಲ ಗಳಿಂದ ವಿದ್ಯುತ್‌ ಪಡೆಯುವ ಕಾರ್ಯದ ಸಮಯದಲ್ಲಿ ಕೇಂದ್ರದ ಘಟಕಗಳಲ್ಲಿ ಈ ರೀತಿಯಾಗಿ ತಾಂತ್ರಿಕ ಲೋಪ-ದೋಷ ಗಳು ಕಂಡುಬರುತ್ತವೆ. ವಿವಿಧ ತಾಂತ್ರಿಕ ದೋಷಗಳಿಂದಾಗಿ ಸ್ಥಗಿತಗೊಂಡಿರುವ ಆರ್‌ ಟಿಪಿಎಸ್ ನ 1 ಮತ್ತು 2 ನೇ ಘಟಕಗಳ ಸಮಗ್ರ ಜೋರ್ಣೋದ್ಧಾರ ಮಾಡಬೇಕಾಗಿದ್ದು, ಬಾಯ್ಲರ್‌ ಸೋರಿಕೆಯಿಂದ ನಿಂತಿರುವ 3 ಮತ್ತು 7 ನೇ ಘಟಕಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿರುವ ಕೆಪಿಸಿಎಲ್‌ ಅಧಿಕಾರಿ-ಸಿಬ್ಬಂದಿ ವರ್ಗದ ತಂಡವು ಶರವೇಗದಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರ ಇಲ್ಲವೇ ಭಾನುವಾರ ಘಟಕಗಳು ಪುನರಾರಂಭಗೊಳ್ಳುವ ಸಾಧ್ಯತೆಗಳಿವೆ.

ವಿವಿಧ ತಾಂತ್ರಿಕ ದೋಷಗಳಿಂದಾಗಿ ಆರ್‌ ಟಿಪಿಎಸ್‌ ನ ನಾಲ್ಕು ಘಟಕಗಳನ್ನು ಸ್ಥಗಿತಗೊಳಿಸಲಾಗಿದ್ದು, ಉಳಿದ ನಾಲ್ಕರಿಂದ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. 3 ಮತ್ತು 7 ನೇ ಘಟಕದಲ್ಲಿ ಉಂಟಾಗಿರುವ ತಾಂತ್ರಿಕ ದೋಷವನ್ನು ಸರಿಪಡಿಸಲಾಗುತ್ತಿದ್ದು, ಶೀರ್ಘದಲ್ಲಿಯೇ ಘಟಕಗಳನ್ನು ಪುನರಾರಂಭಗೊಳಿಸಲಾಗುವುದು ಎಂದು ಆರ್‌ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್‌ ಎಚ್‌.ಆರ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ