ಕನ್ನಡಪ್ರಭ ವಾರ್ತೆ ಮಂಡ್ಯ
ಮಾನಸಿಕ ಅಸ್ವಸ್ಥೆ ಮದ್ದೂರು ತಾಲೂಕು ತರೀಕೆರೆ ಗ್ರಾಮದ ಸುಧಾ ಅವರ ಆಸ್ತಿ, ಹಣವನ್ನು ಅದೇ ಗ್ರಾಮದ ವಾಣಿ ಅಲಿಯಾಸ್ ಹೊನ್ನೇಗೌಡ ಮತ್ತು ಎಚ್.ಬಿ.ಸ್ಮಿತಾ, ಮಹಿಳಾ ಅಧಿಕಾರಿ ಸೋಗಿನಲ್ಲಿದ್ದ ಶಾಂತಮ್ಮ, ರಾಮಕೃಷ್ಣ, ಶಶಿಕುಮಾರ್, ಶಿವಬೋರಯ್ಯ ಎಂಬುವರು ಸಂಚು ರೂಪಿಸಿ ವಂಚಿಸಿದ್ದಾರೆ ಎಂದು ವಂಚನೆಗೊಳಗಾದ ಸುಧಾಳ ಸಹೋದರ ಕೃಷ್ಣೇಗೌಡ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ತರೀಕೆರೆ ಗ್ರಾಮದ ಲಿಂಗಯ್ಯ ಅವರು ಸುಧಾಳನ್ನು ಎರಡನೇ ಪತ್ನಿಯಾಗಿ ಮದುವೆ ಮಾಡಿಕೊಂಡಿದ್ದರು. ಈ ವಿಚಾರ ತಿಳಿದ ಶ್ರೀರಂಗಪಟ್ಟಣ ತಾಲೂಕು ಶಾಂತಿಕೊಪ್ಪಲು ಗ್ರಾಮದ ಶಾಂತಮ್ಮ ಮತ್ತು ಇತರರು ಸುಧಾಗೆ ಗಂಡನಿಂದ ಬರಬೇಕಾದ ಜಮೀನು ಮತ್ತು ಇತರೆ ಆಸ್ತಿಯನ್ನು ಬರೆಸಿಕೊಡುವುದು, ಸರ್ಕಾರದ ವಿವಿಧ ಸವಲತ್ತುಗಳನ್ನು ಕೊಡಿಸುವುದಾಗಿ ನಂಬಿಸಿ ತರೀಕೆರೆ ಗ್ರಾಮದಲ್ಲಿದ್ದ ೧.೧೪ ಎಕರೆ ಜಮೀನನ್ನು ಶಿವಬೋರಯ್ಯ ಎಂಬುವರ ಹೆಸರಿಗೆ ಮದ್ದೂರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ ಎಂದು ದೂರಿದರು.ಈ ಬಗ್ಗೆ ವಿಚಾರ ತಿಳಿದಾಗ ನಾವು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ರಾಮಕೃಷ್ಣ, ವಾಣಿ, ಸ್ಮಿತಾ, ಶಾಂತಮ್ಮ, ಶಶಿಕುಮಾರ್, ಶಿವಬೋರಯ್ಯ ಅವರ ಬಳಿ ಮಾತುಕತೆ ನಡೆಸಿದಾಗ ಮತ್ತೆ ವಾಪಸ್ಸು ಸುಧಾಳ ಹೆಸರಿಗೆ ಬರೆಸಿಕೊಡುವುದಾಗಿ ತಿಳಿಸಿ ಎಲ್ಲೂ ದೂರು ದಾಖಲು ಮಾಡದಂತೆ ತಿಳಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಂಬಂಧಿಯಿಂದ ೩೮ ಸಾವಿರ ರು. ಡಿಡಿ ಪಡೆದುಕೊಂಡಿದ್ದಾರೆ. ನಂತರ ಜಮೀನು ವಾಪಸ್ಸು ಬರೆಸಿಕೊಡುವಂತೆ ಕೇಳಿದರೆ ನಾವು ಯಾರಿಗೂ ಜಮೀನು ನೋಂದಣಿ ಮಾಡಿಕೊಡುವುದಿಲ್ಲ ಎಂದು ಉದ್ಧಟತನದ ಮಾತುಗಳನ್ನಾಡಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತಪರ ಹೋರಾಟಗಾರರ ಸಂಘದ ಅಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್ ಮಾತನಾಡಿ, ನೊಂದ ಮಾನಸಿಕ ಅಸ್ವಸ್ಥ ಮಹಿಳೆ ಎನ್ನುವುದನ್ನೂ ನೋಡದೆ ಅವರ ಆ ಕುಟುಂಬದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಜಮೀನು ಮತ್ತು ನಿವೇಶನವನ್ನು ನೋಂದಣಿ ಮಾಡಿಸಿಕೊಂಡಿದ್ದೂ ಅಲ್ಲದೆ, ಆಕೆಯ ಪತಿಯನ್ನು ಬೆದರಿಸಿ ಲಕ್ಷಾಂತರ ರೂ. ವಸೂಲಿ ಮಾಡಿದ್ದಾರೆ. ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.