;Resize=(412,232))
ಬೆಂಗಳೂರು : ಮನೆ ಭೋಗ್ಯ ಕೊಡಿಸುವ ನೆಪದಲ್ಲಿ ಕೋಟ್ಯಂತರ ರು. ವಂಚಿಸಿದ ಆರೋಪದ ಮೇರೆಗೆ ಖಾಸಗಿ ಕಂಪನಿಯ ಮಾಲಿಕನೊಬ್ಬ ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸರಿಗೆ ಸೆರೆಯಾಗಿದ್ದಾನೆ.
ಕೇರಳ ಮೂಲದ ವಿವೇಕ್ ಕೇಶವನ್ ಬಂಧಿತನಾಗಿದ್ದು, ವಂಚನೆ ಕೃತ್ಯ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗುಜರಾತ್ ರಾಜ್ಯದ ಅಹಮದಾಬಾದ್‌ನ ವಿಮಾನ ನಿಲ್ದಾಣದಲ್ಲಿ ಸೆರೆಹಿಡಿದು ಸಿಐಡಿ ನಗರಕ್ಕೆ ಕರೆತಂದಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಭೋಗ್ಯಕ್ಕೆ ಮನೆ ಪಡೆದು ವಂಚಿಸಿರುವ ಬಗ್ಗೆ ವಿವೇಕ್ ಕೇಶವನ್ ಕಂಪನಿ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೃತ್ಯದಲ್ಲಿ ಆತನ ಕಂಪನಿಯ ಏಜೆಂಟ್‌ಗಳಾದ ವೈಟ್‌ಫೀಲ್ಡ್ ನಿವಾಸಿಗಳಾದ ರಮಣ, ನವೀನ್ ಹಾಗೂ ಸುಧೀರ್ ಬಂಧಿತರಾಗಿದ್ದರು. ಆದರೆ ಈ ವಂಚನೆ ಪ್ರಕರಣ ದಾಖಲಾದ ಬಳಿಕ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಕೇಶವನ್ ಕೊನೆಗೆ ಸಿಐಡಿ ಬಲೆಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.
ಮನೆ ಭೋಗ್ಯ ವ್ಯವಹಾರ ಸಂಬಂಧ ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯನ್ನು ವಿವೇಕ್ ಕೇಶವನ್ ಸ್ಥಾಪಿಸಿದ್ದು, ಬಾಣಸವಾಡಿ, ಮಾರತ್ತಹಳ್ಳಿ, ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆ ಕಂಪನಿಯ ಶಾಖೆಗಳಿದ್ದವು. ಕಟ್ಟಡದ ಮಾಲಿಕರಿಂದ ಕಡಿಮೆ ಬೆಲೆಗೆ ಮನೆ ಭೋಗ್ಯಕ್ಕೆ ಪಡೆದು ಬಳಿಕ ತಮ್ಮ ಕಂಪನಿ ಮೂಲಕ ಸಾರ್ವಜನಿಕರಿಗೆ ಆ ಮನೆಗಳನ್ನು ಆತ ಬಾಡಿಗೆ ಕೊಡುತ್ತಿದ್ದ. ಇಲ್ಲಿ ಮನೆ ಕಟ್ಟಡದ ಮಾಲಿಕರು ಹಾಗೂ ಬಾಡಿಗೆದಾರರ ಮಧ್ಯೆ ಮಧ್ಯವರ್ತಿಯಂತೆ ಈ ಕಂಪನಿ ಕಾರ್ಯನಿರ್ವಹಿಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇದೇ ರೀತಿ ನಗರದ ಹಲವು ಕಡೆ ನೂರಾರು ಫ್ಲ್ಯಾಟ್‌ಗಳು ಹಾಗೂ ಮನೆಗಳನ್ನು ಕಂಪನಿ ಭೋಗ್ಯಕ್ಕೆ ಪಡೆದಿತ್ತು. ಮೊದಲು ಉತ್ತಮ ವಹಿವಾಟು ನಡೆಸಿ ಗ್ರಾಹಕರ ವಿಶ್ವಾಸವನ್ನು ವಿವೇಕ್ ಕೇಶವನ್ ಗಳಿಸಿದ್ದ. ಆದರೆ ಕೊರೋನಾ ಕಾಲದಲ್ಲಿ ಕಂಪನಿ ಆರ್ಥಿಕ ವಹಿವಾಟಿಗೆ ಸಂಕಷ್ಟ ಎದುರಾಯಿತು. ಅದೇ ವೇಳೆ ತೆರಿಗೆ ವಂಚನೆ ಆರೋಪದಡಿ ಕೆಟಿನಾ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತು. ಅಲ್ಲದೆ ಆ ಕಂಪನಿಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತು.
ಇದರಿಂದ ಹಣಕಾಸು ವಹಿವಾಟಿಲ್ಲದೆ ಆರೋಪಿಗಳು ತೊಂದರೆಗೆ ಸಿಲುಕಿದರು. ಆಗ ಮನೆ ಮಾಲಿಕರಿಗೆ ಭೋಗ್ಯದ ಹಣ ಪಾವತಿಸಲಾಗದೆ ಆರೋಪಿಗಳು ವಂಚಿಸಿದ್ದಾರೆ. ಇದೇ ರೀತಿ ಎಲೆಕ್ಟ್ರಾನಿಕ್ ಸಿಟಿ, ಸಂಪಿಗೆಹಳ್ಳಿ, ವೈಟ್ ಫೀಲ್ಡ್ ಹಾಗೂ ಬಾಣಸವಾಡಿ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ಸಿಐಡಿ ತನಿಖೆಗೆ ಸರ್ಕಾರ ಆದೇಶಿಸಿತ್ತು. ಅಂತೆಯೇ ತನಿಖೆಗಿಳಿದ ಸಿಐಡಿ, ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗೆ ಬಲೆ ಬೀಸಿತ್ತು.
ವಂಚನೆ ಪ್ರಕರಣ ಸಂಬಂಧ ವಿವೇಕ್ ಕೇಶವನ್ ವಿರುದ್ಧ ಲುಕ್ ನೋಟಿಸ್ ಅನ್ನು ಸಿಐಡಿ ಜಾರಿಗೊಳಿಸಿತ್ತು. ಅಂತೆಯೇ ನಾಲ್ಕು ದಿನಗಳ ಹಿಂದೆ ವಿದೇಶದಿಂದ ಗುಜರಾತ್ ರಾಜ್ಯದ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಆತನನ್ನು ವಲಸೆ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದರು. ಬಳಿಕ ಅಹಮದಾಬಾದ್‌ಗೆ ತೆರಳಿದ ಸಿಐಡಿ ಅಧಿಕಾರಿಗಳು, ವಿವೇಕ್ ಕೇಶವನ್‌ನನ್ನು ಬಂಧಿಸಿ ಕರೆತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬ್ಯುಸಿನೆಸ್ ಮಾದರಿ ತಪ್ಪು-ಕೇಶವನ್
ತಾನು ಜನರಿಗೆ ಮೋಸಗೊಳಿಸುವ ಉದ್ದೇಶದಿಂದ ಕಂಪನಿ ಸ್ಥಾಪಿಸಿರಲಿಲ್ಲ. ಆದರೆ ಹಣಕಾಸು ನಿರ್ವಹಣೆಯಲ್ಲಿ ತಪ್ಪಾಯಿತು. ಮಾಲಿಕರಿಂದ ಮನೆ ಹಾಗೂ ಫ್ಲ್ಯಾಟ್‌ಗಳನ್ನು ಮಾಸಿಕ ಬಾಡಿಗೆಗೆ ಪಡೆದು ಬಳಿಕ ಜನರಿಗೆ ಭೋಗ್ಯಕ್ಕೆ ಕೊಡುತ್ತಿದ್ದೆ. ಈ ಭೋಗ್ಯದ ಹಣದಲ್ಲಿ ತಿಂಗಳ ಬಾಡಿಗೆ ಪಾವತಿಸುತ್ತಿದ್ದೆ. ಅಲ್ಲದೆ ಆ ಮನೆಗಳ ನವೀಕರಣ ಸೇರಿದಂತೆ ಇತರೆ ವೆಚ್ಚಗಳನ್ನು ನಾನೇ ಭರಿಸಿದ್ದೆ. ಆದರೆ ನನ್ನ ಬ್ಯೂಸಿನೆಸ್ ಮಾದರಿ ತಪ್ಪಾಗಿದೆ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.
25 ಕೋಟಿ ವಂಚನೆ?
ಭೋಗ್ಯದ ಹೆಸರಿನಲ್ಲಿ ಜನರಿಗೆ 25 ಕೋಟಿ ರು. ವಂಚನೆ ಮಾಡಲಾಗಿದೆ ಎಂದು ಕೇಶವನ್ ಕಂಪನಿ ವಿರುದ್ಧ ಆರೋಪ ಬಂದಿದೆ. ಆದರೆ ಈ ಹಣಕಾಸು ವಹಿವಾಟಿನ ಕುರಿತು ಲೆಕ್ಕ ಪರಿಶೋಧನೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.