ಜಿಲ್ಲಾ ಆಸ್ಪತ್ರೆಯಿಂದ ರೋಗಿಗಳಿಗೆ ಉಚಿತ ಆ್ಯಂಬ್ಯುಲೆನ್ಸ್ ಸೇವೆ

KannadaprabhaNewsNetwork | Published : Mar 15, 2025 1:00 AM

ಸಾರಾಂಶ

ಉಚಿತ ಆ್ಯಂಬ್ಯುಲೆನ್ಸ್ ಸೇವೆ ಇಂದಿನಿಂದ ಜಾರಿಯಾಗಿದ್ದು, ಮಾ.೨೪ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಅಧಿಕೃತವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಜಿಲ್ಲೆಯ ಎಲ್ಲಾ ಶಾಸಕರು ಉಪಸ್ಥಿತರಿರುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಒದಗಿಸಲಾಗುತ್ತಿದ್ದ ಆ್ಯಂಬ್ಯುಲೆನ್ಸ್ ಸೇವೆಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ರದ್ದುಪಡಿಸಲಾಗಿದೆ. ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ನಿರ್ದೇಶನದಂತೆ ಇನ್ನು ಮುಂದೆ ಆ್ಯಂಬ್ಯುಲೆನ್ಸ್ ಸೇವೆ ಉಚಿತವಾಗಿ ದೊರೆಯಲಿದೆ.

ಇಲ್ಲಿಯವರೆಗೆ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕರೆತರಲು ಅಥವಾ ಮೈಸೂರಿಗೆ ಕರೆದೊಯ್ಯಲು ಪ್ರತಿ ಕಿ.ಮೀ.ಗೆ ನಿಗದಿತ ಶುಲ್ಕವನ್ನು ಆರೋಗ್ಯ ರಕ್ಷಾ ಸಮಿತಿ ವಿಧಿಸುತ್ತಿತ್ತು. ಕನಿಷ್ಠ ೫೦೦ ರು.ನಿಂದ ೧೦೦೦ ರು.ವರೆಗೆ ಬಡ ಹಾಗೂ ಮಧ್ಯಮವರ್ಗದವರಿಗೆ ಹೊರೆಯಾಗುತ್ತಿತ್ತು. ನಗು-ಮಗು ಯೋಜನೆಯಡಿ ಇರುವ ಆ್ಯಂಬ್ಯುಲೆನ್ಸ್ ಸೇವೆಗಳಿಗೂ ಶುಲ್ಕ ಪಡೆಯಲಾಗುತ್ತಿತ್ತು. ಆ್ಯಂಬ್ಯುಲೆನ್ಸ್ ಸೇವೆಗಳ ನಿರ್ವಹಣಾ ವೆಚ್ಚವನ್ನು ಜಿಲ್ಲಾ ಆರೋಗ್ಯ ಇಲಾಖೆ ಭರಿಸುವುದರಿಂದ ಇನ್ನು ಮುಂದೆ ಸಾರ್ವಜನಿಕರಿಗೆ ಉಚಿತ ಆ್ಯಂಬ್ಯುಲೆನ್ಸ್ ಸೇವೆ ಒದಗಿಸುವ ನಿರ್ಧಾರ ಮಾಡಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಆ್ಯಂಬ್ಯುಲೆನ್ಸ್ ಸೇವೆಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ.

ನಗು- ಮಗು ಆ್ಯಂಬ್ಯುಲೆನ್ಸ್‌ ಮೂಲಕ ಹೆರಿಗೆಗೆ ಗರ್ಭಿಣಿಯನ್ನು ಕರೆತರುವುದಕ್ಕೂ ಯಾವುದೇ ಶುಲ್ಕ ಪಡೆಯುವುದಿಲ್ಲ. ಈ ಮೊದಲು ಗರ್ಭಿಣಿಯನ್ನು ಕರೆತರುವುದಕ್ಕೆ ಶುಲ್ಕ ಪಡೆದುಕೊಳ್ಳುತ್ತಿದ್ದು, ಹೆರಿಗೆಯಾದ ಬಳಿಕ ಬಾಣಂತಿ- ಮಗುವನ್ನು ಮನೆಗೆ ಬಿಟ್ಟು ಬರುವುದಕ್ಕೆ ಶುಲ್ಕ ತೆಗೆದುಕೊಳ್ಳುತ್ತಿರಲಿಲ್ಲ. ನಗು-ಮಗು ಆ್ಯಂಬ್ಯುಲೆನ್ಸ್‌ ಕೂಡ ಉಚಿತವಾಗಿ ಸಿಗಲಿದೆ.

ಆರಂಭಿಕವಾಗಿ ಮಂಡ್ಯ ಜಿಲ್ಲೆಯ ಯಾವುದೇ ತಾಲೂಕಿನಿಂದ ಮಿಮ್ಸ್‌ ಆಸ್ಪತ್ರೆಗೆ ಆಗಮಿಸಿದರೆ ಅಥವಾ ಮೈಸೂರಿಗೆ ಕರೆದೊಯ್ದರೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಉಚಿತ ಆ್ಯಂಬ್ಯುಲೆನ್ಸ್ ಸೇವೆ ಜಿಲ್ಲಾ ವ್ಯಾಪ್ತಿ ಮತ್ತು ಮೈಸೂರುವರೆಗೆ ಮಾತ್ರ ಸೀಮಿತವಾಗಿರುತ್ತದೆ. ಬೆಂಗಳೂರಿಗೆ ಕರೆದೊಯ್ಯುವುದಕ್ಕೆ ಇದು ಅನ್ವಯವಾಗುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಕನ್ನಡಪ್ರಭಕ್ಕೆ ತಿಳಿಸಿದರು.

ಉಚಿತ ಆ್ಯಂಬ್ಯುಲೆನ್ಸ್ ಸೇವೆ ಇಂದಿನಿಂದ ಜಾರಿಯಾಗಿದ್ದು, ಮಾ.೨೪ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಅಧಿಕೃತವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಜಿಲ್ಲೆಯ ಎಲ್ಲಾ ಶಾಸಕರು ಉಪಸ್ಥಿತರಿರುವರು.

---

‘ಜಿಲ್ಲಾ ಆಸ್ಪತ್ರೆಯಿಂದ ಒದಗಿಸಲಾಗುತ್ತಿರುವ ಆ್ಯಂಬ್ಯುಲೆನ್ಸ್ ಸೇವೆಗೆ ಇನ್ನು ಮುಂದೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಸಂಪೂರ್ಣ ಉಚಿತವಾಗಿರುತ್ತದೆ. ಅ್ಯಂಬ್ಯುಲೆನ್ಸ್‌ಗಳ ನಿರ್ವಹಣಾ ವೆಚ್ಚವನ್ನು ಆರೋಗ್ಯ ಇಲಾಖೆಯೇ ಭರಿಸುತ್ತಿದ್ದು, ಜಿಲ್ಲಾ ವ್ಯಾಪ್ತಿಯಿಂದ ಮೈಸೂರುವರೆಗೆ ಮಾತ್ರ ಈ ಸೇವೆ ಉಚಿತವಾಗಿರುತ್ತದೆ. ಬಡವರಿಗೆ ಹೊರೆಯಾಗದಂತೆ ಜಿಲ್ಲಾ ಉಸ್ತುವಾರಿ ಸಚಿವರು ಉಚಿತ ಸೇವೆ ಒದಗಿಸುವಂತೆ ನಿರ್ದೇಶಿಸಿದ್ದು, ಮಾ.೨೪ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.’

- ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ

Share this article