ಬಸವರಾಜ ಭರಮಪ್ಪ ಜಾಧವ
ಕಳೆದ 30 ವರ್ಷಗಳಿಂದ ನಗರದ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದಿಂದ ಎರಡು ದಿನಗಳ ಕಾಲ 850ಕ್ಕೂ ಅಧಿಕ ಆಟೋಗಳಿಂದ ಉಚಿತ ಸೇವೆ ಕೈಗೊಳ್ಳಲಾಗಿದೆ. ಶ್ರೀ ಸಿದ್ಧಾರೂಢರ ಮಠದಲ್ಲಿ ನಡೆಯುವ ಮಹಾಶಿವರಾತ್ರಿ ಹಾಗೂ ಶ್ರೀ ಸಿದ್ಧಾರೂಢರ ರಥೋತ್ಸವಕ್ಕೆ ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿದೆ.
ಭಾನುವಾರ ಶಿವರಾತ್ರಿ ಅಂಗವಾಗಿ ಶ್ರೀ ಸಿದ್ಧಾರೂಢರ ಮಠಕ್ಕೆ ನಗರದ ವಿವಿಧ ಆಟೋ ನಿಲ್ದಾಣಗಳಿಂದ 350ಕ್ಕೂ ಅಧಿಕ ಉಚಿತ ಆಟೋ ಸೇವೆ ಒದಗಿಸಲಾಗಿದೆ. ಸೋಮವಾರ ಜಾತ್ರೆ ಹಿನ್ನೆಲೆಯಲ್ಲಿ ಇದರೊಂದಿಗೆ 500 ಆಟೋಗಳಿಂದ ಉಚಿತ ಸೇವೆ ನೀಡಲಾಗುತ್ತಿದ್ದು, ಸೋಮವಾರ ಬೆಳಗ್ಗೆ 10 ಗಂಟೆಗೆ ಹಳೇ ಹುಬ್ಬಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ಚಾಲನೆ ನೀಡಲಾಗುತ್ತಿದೆ. ಎರಡು ದಿನಗಳಲ್ಲಿ ಒಟ್ಟು 850ಕ್ಕೂ ಅಧಿಕ ಆಟೋಗಳಿಂದ ಉಚಿತ ಸೇವೆ ನೀಡಲಾಗುತ್ತಿದೆ.ನಿಲ್ದಾಣದಲ್ಲೇ ಪ್ರಸಾದ ವಿತರಣೆ
ಪ್ರಾರಂಭದಲ್ಲಿ 50 ಆಟೋರಿಕ್ಷಾ ಚಾಲಕರಿಂದ ಸ್ವಯಂ ಪ್ರೇರಿತವಾಗಿ ಚಾಲನೆಗೊಂಡ ಈ ಭಕ್ತಿಯ ಸೇವೆಗೆ ಇಂದು 850ಕ್ಕೂ ಅಧಿಕ ಆಟೋರಿಕ್ಷಾ ಚಾಲಕರು ಕೈಜೋಡಿಸಿದ್ದಾರೆ. ಈ ಕಾರ್ಯದಲ್ಲಿ ಸರ್ವ ಧರ್ಮದ ಆಟೋ ಚಾಲಕರು ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದು ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಹೇಳಿದರು.
ಎಲ್ಲವೂ ಅಜ್ಜನ ಸನ್ನಿಧಾನಕ್ಕೆ ಬರುವ ಭಕ್ತರಿಗೆ ಅನಕೂಲವಾಗಲಿ ಎಂಬ ಉದ್ದೇಶದಿಂದ ಈ ಸೇವಾ ಕಾರ್ಯ ಕೈಗೊಳ್ಳಲಾಗುತ್ತಿದೆ. ದೂರದ ಊರಿನಿಂದ ಬರುವ ಭಕ್ತರನ್ನು ಕಾಳಜಿಯಿಂದ ಶ್ರೀಮಠಕ್ಕೆ ಬಿಡುವ ಕಾರ್ಯ ನಮ್ಮೆಲ್ಲ ಸ್ನೇಹಿತರು ಮಾಡುತ್ತಿದ್ದಾರೆ ಎಂದು ಶ್ರೀ ಸಿದ್ಧಾರೂಢ ರೈಲು ನಿಲ್ದಾಣದ ಆಟೋ ಚಾಲಕರ ಸಂಘದ ಅಧ್ಯಕ್ಷ ಶ್ರೀಕಾಂತ ಗಡಾದ ತಿಳಿಸಿದರು.