ಬುಲೆಟ್ ಟ್ರೈನ್, ವಿಮಾನ ನಿಲ್ದಾಣಕ್ಕಿಂತ ಶಿಕ್ಷಣ ಬೇಕು। ಶಾಲೆಗಳಿಗೆ ಉಚಿತ ವಿದ್ಯುತ್ । ಇನ್ನೂ ೫೦೦ ಶಾಲೆ ಆರಂಭ । ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ
ಕನ್ನಡಪ್ರಭ ವಾರ್ತೆ ಕುಕನೂರು
ಬುಲೆಟ್ ಟ್ರೈನ್, ವಿಮಾನ ನಿಲ್ದಾಣಕ್ಕಿಂತ ಶಿಕ್ಷಣ ಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ಮಾತ್ರ ಉತ್ತಮ ಶಿಕ್ಷಕರು ಇದ್ದಾರೆ. ಶಿಕ್ಷಣ ಇಲಾಖೆ ಈಗಾಗಲೇ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ವಿಶೇಷ ತರಬೇತಿ ನೀಡುವ ಯೋಜನೆ ರೂಪಿಸಿದೆ. ಇದರಿಂದ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕೆಕೆಆರ್‌ಡಿಬಿ ಅನುದಾನದಡಿ ಬುಧವಾರ ನೂತನ ಸರ್ಕಾರಿ ಪ್ರೌಢಶಾಲೆ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಇದರ ಸದುಪಯೋಗವನ್ನು ಶಿಕ್ಷಕರು ಪಡೆದುಕೊಳ್ಳಬೇಕು. ಸಂಜೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬೆಳಕಿನ ಅನುಕೂಲ ಕಲ್ಪಿಸುವ ಮೂಲಕ ಓದಿನ ಕಡೆ ಒತ್ತು ನೀಡಬೇಕು. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡಿಸುವ ಕಾರ್ಯವಾಗಬೇಕು ಎಂದರು.
ನನ್ನ ಹೇರ್ ಸ್ಟೈಲ್ ಸರಿಯಿಲ್ಲ ಅನ್ನುವ ಬಿಜಿಪಿಯವರ ಭಾವನೆ ಸರಿಯಿಲ್ಲ. ನನ್ನ ಹೇರ್ ಕಟಿಂಗ್ ನನ್ನ ತಂದೆ ಬಂಗಾರಪ್ಪ ಅವರಿಗೆ ಇಷ್ಟವಾಗಿತ್ತು. ಇದರಿಂದ ಈ ಹೇರ್ ಸ್ಟೈಲ್ ಇದೆ. ಬಂಗಾರಪ್ಪ ಅವರಿಗೆ ಇಷ್ಟವಾದ ಮೇಲೆ ಮತ್ತೆ ಬೇರೆಯವರ ಇಷ್ಟದ ಮಾತು ಇಲ್ಲ ಎಂದರು.ನಮ್ಮ ಸರ್ಕಾರ ನೂರು ರೂಪಾಯಿಯಲ್ಲಿ ಶಿಕ್ಷಣಕ್ಕೆ ₹೨೫ ಖರ್ಚು ಮಾಡುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆಗೆ ರಾಯರಡ್ಡಿ ಅವರಿಂದ ಗೌರವ ಬಂದಿದೆ. ಶಿಕ್ಷಣ ಇಲಾಖೆಯ ಸಚಿವರಾದರೆ ರಾಜಕಾರಣಿಗಳು ಹಾಳಾಗುತ್ತಾರೆ ಎಂಬ ಹೇಳಿಕೆ ಇದೆ. ಆದರೆ, ಇದೊಂದು ಉತ್ತಮ ಅವಕಾಶ ನನಗೆ ದೊರೆತಿದೆ ಎಂದರು.
ಮಧು ಬಂಗಾರಪ್ಪ ಅವರ ಭಾಷಣದ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಶಾಸಕ ಬಸವರಾಜ ರಾಯರಡ್ಡಿ ಅವರು, ಹಿಂದೆ ನನಗೂ ಪ್ರಾಥಮಿಕ ಶಿಕ್ಷಣ ಇಲಾಖೆ ನೀಡಿದ್ದರು. ಶಿಕ್ಷಣ ಇಲಾಖೆ ನಿರ್ವಹಿಸುವುದು ಸುಲಭದ ಮಾತಲ್ಲ. ₹೪೪ ಸಾವಿರ ಕೋಟಿ ಬಜೆಟ್‌ನ ಹಣ ಶಿಕ್ಷಕರ ವೇತನವಾಗುತ್ತದೆ. ಅಂತಹ ಇಲಾಖೆಯ ಕೆಲಸವನ್ನು ಮಧು ಬಂಗಾರಪ್ಪ ಉತ್ತಮವಾಗಿ ಮಾಡುತ್ತಿದ್ದಾರೆ ಎಂದರು.ನಂತರ ಮಾತು ಮುಂದುವರಿಸಿದ ಸಚಿವ ಮಧು ಬಂಗಾರಪ್ಪ ಅವರು, ರಾಜ್ಯದಲ್ಲಿ ೫೩ ಸಾವಿರ ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡುವುದು ಸುಲಭವಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ೪೯೦೦ ಶಿಕ್ಷಕರನ್ನು ನೇಮಕ ಮಾಡಿಕೊಂಡರು. ನಮ್ಮ ಅವಧಿಯಲ್ಲಿ ೧೩೫೦೦ ಶಿಕ್ಷಕರ ನೇಮಕ ಮಾಡಿದ್ದೇವೆ. ಶಿಕ್ಷಣ ಇಲಾಖೆಯನ್ನೂ ಪ್ರಸಾದ ಎಂದು ಸ್ವೀಕರಿಸಿದ್ದೇನೆ ಎಂದರು.
೨೦೧೪ರಿಂದ ಇದುವರೆಗೂ ಅನುದಾನಿತ ಶಾಲೆಯಲ್ಲಿ ಶಿಕ್ಷಕರ ನೇಮಕವಾಗಿಲ್ಲ. ಐದು ವರ್ಷಕ್ಕೆ ಅನುದಾನಿತ ಶಾಲೆಗೆ ಅತಿಥಿ ಶಿಕ್ಷಕರ ನೇಮಕಾತಿ ಹಾಗೂ ೧೦ರಿಂದ ೧೨ ಸಾವಿರ ಶಿಕ್ಷಕರ ನೇಮಕ ಮಾಡುತ್ತಿದ್ದೇನೆ.ಕರ್ನಾಟಕ ಪಬ್ಲಿಕ್ ಶಾಲೆ ಆರಂಭ ಮಾಡುತ್ತಿದ್ದೇವೆ. ಈಗ ೫೦೦ ಶಾಲೆಗಳಿದ್ದು, ಇನ್ನೂ ೫೦೦ ಶಾಲೆ ಆರಂಭಿಸಿ, ಎಲ್‌ಕೆಜಿಯಿಂದ ಪಿಯುಸಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಅಂಗನವಾಡಿ ಕಾರ್ಯಕರ್ತೆಯರಿಗೆ ತೊಂದರೆ ಮಾಡುವುದಿಲ್ಲ. ಶಾಲೆಗೆ ತಿಂಗಳೊಳಗೆ ಹೆಚ್ಚು ಮೊಟ್ಟೆ ನೀಡುವ ವ್ಯವಸ್ಥೆ ಮಾಡುತ್ತಿದ್ದೇವೆ. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿದ್ದೇವೆ. ಗುಣಮಟ್ಟಕ್ಕಾಗಿ ಕ್ರಮ ತೆಗೆದುಕೊಂಡಿದ್ದೇವೆ. ಆದರೆ ಬಿಜೆಪಿ ಅವರು ಅದಕ್ಕೂ ಟೀಕೆ ಮಾಡಿದ್ದಾರೆ.
ನನಗೆ ಕನ್ನಡ ಬರಲ್ಲ ಎಂದು ಬಿಜೆಪಿಯವರು ಟೀಕಿಸಿದರು, ಆದರೆ ಮಾತನಾಡುವುದಕ್ಕೆ ತೊಂದರೆ ಇಲ್ಲ. ಓದುವುದಕ್ಕೆ ಮಾತ್ರ ಸ್ವಲ್ಪ ತೊಂದರೆ. ನಾನು ಇಲಾಖೆಗೆ ಸಚಿವ ಆಗಿದ್ದೇನೆ ಹೊರತೂ, ಮಕ್ಕಳಿಗೆ ಪಾಠ ಮಾಡಲು ಏನೂ ಹೋಗಿಲ್ಲ. ಸಿಎಂ ಸಿದ್ದರಾಮಯ್ಯ ಪಕ್ಷಕ್ಕಾಗಿ ಮಾತ್ರ ಗ್ಯಾರಂಟಿ ಯೋಜನೆ ನೀಡಿಲ್ಲ. ರಾಜ್ಯದ ಜನರಿಗೆ ಅನುಕೂಲಕ್ಕಾಗಿ ನೀಡಿದ್ದಾರೆ ಎಂದರು.