ಹೂವಿನಹಡಗಲಿ: ಈಚಿಗೆ ಮಾದಕ ದ್ರವ್ಯಗಳ ಬಳಕೆ ಹೆಚ್ಚಾಗುವ ಜತೆಗೆ ಸೈಬರ್ ಅಪರಾಧಗಳಿಂದ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವುಗಳಿಂದ ಮುಕ್ತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಹರಪನಹಳ್ಳಿ ಡಿವೈಎಸ್ಪಿ ಸಂತೋಷ ಚೌವ್ಹಾಣ್ ಹೇಳಿದರು.ಇಲ್ಲಿನ ಜಿಬಿಆರ್ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಮಾದಕ ದ್ರವ್ಯ ಮತ್ತು ಸೈಬರ್ ಅಪರಾದಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಮಾದಕ ದ್ರವ್ಯ ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಪಾಲಕರ ಕಷ್ಟದವನ್ನು ಅರಿತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ನಿರಂತರವಾಗಿ ಅಭ್ಯಾಸ ಮಾಡಬೇಕೆಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಹಾಗೂ ಇತರೆ ಅಧಿಕಾರಿಗಳ ವೇಷದಲ್ಲಿ, ಸೈಬರ್ ವಂಚಕರ ಸಂಖ್ಯೆ ಹೆಚ್ಚಾಗಿದ್ದು, ನಿಮ್ಮಿಂದ ಹಣ ಕೀಳಲು ನೋಡುತ್ತಾರೆ. ಆ ರೀತಿ ಕರೆಗಳು ಬಂದಾಗ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ 1930 ಸಂಖ್ಯೆ ಕರೆ ಮಾಡಿ ದೂರು ನೀಡಬೇಕೆಂದು ಹೇಳಿದರು.ವಿದ್ಯಾರ್ಥಿಗಳನ್ನೇ ಕೇಂದ್ರೀಕರಿಸಿ ಅವರ ಪಾಲಕರ ಬಳಿ ಹಣ ಪಡೆಯಲು, ವಂಚಕರು ಆಯಾ ಪ್ರದೇಶದ ಭಾಷೆಗಳನ್ನು ಮಾತನಾಡುವ ತಂಡವನ್ನು ರಚಿಸಿ ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯುವಕರು ಇದರಿಂದ ಜಾಗೃತರಾಗಿ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿಯ ಕಡೆಗೆ ಗಮನ ಕೊಡಿ ಎಂದರು.
ಯುವಕರು ದುಶ್ಚಟಗಳಿಂದ ದೂರ ಉಳಿದು ಪಾಲಕರ ಪರಿಶ್ರಮ ಗಮನದಲ್ಲಿಟ್ಟುಕೊಂಡು ಉನ್ನತ ಹುದ್ದೆಯನ್ನು ಪಡೆಯಬೇಕೆಂದು ಹೇಳಿದರು.ಸಿಪಿಐ ದೀಪಕ್ ಆರ್ ಭೂಸರೆಡ್ಡಿ ಮಾತನಾಡಿ, ಈಚಿಗೆ ವಿದ್ಯಾರ್ಥಿಗಳು ಪ್ರೀತಿ, ಪ್ರೇಮದ ಆಕರ್ಷಣೆಗೆ ಒಳಗಾಗಿ ಉತ್ತಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಪಾಲಕರು ಉತ್ತಮ ಭವಿಷ್ಯವನ್ನು ನಿರ್ಮಾಣ ಸಿದ್ಧರಿದ್ದಾರೆ, ಅವರಿಗೆ ವಂಚನೆ ಮಾಡಬೇಡಿ ಎಂದರು. ಜಿಬಿಆರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ ರೆಡ್ಡಿ, ಪ್ರಭಾರ ಪ್ರಾಚಾರ್ಯ ಚಂದ್ರಬಾಬು, ದೈಹಿಕ ನಿರ್ದೇಶಕ ಬಡೇಸಾಬ ನಾಯಕ, ಸಹಾಯಕ ಪ್ರಾಧ್ಯಾಪಕ ಅನ್ನದಾನಪ್ಪ, ಡಾ.ಶರಣಪ್ಪ, ಮಾಬುಸಾಬ್, ಆಶಾ ಬಾರಿಕರ, ವೀಣಾಶ್ರೀ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.