ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ತಾಲೂಕಿನ ದೋಟಿಹಾಳದಲ್ಲಿರುವ ಖಾದಿ ಗ್ರಾಮದ್ಯೋಗ ಕೇಂದ್ರ ಸ್ಥಗಿತಗೊಂಡು ಐದು ವರ್ಷ ಗತಿಸಿದರೂ ಸಹಿತ ಇಲ್ಲಿಯವರೆಗೆ ಕೇಂದ್ರದ ಬಾಗಿಲು ತೆರೆಯಲು ಅಧಿಕಾರಿಗಳು ಮುಂದಾಗದಿರುವದು ವಿಪರ್ಯಾಸದ ಸಂಗತಿ.
ಇತ್ತೀಚಿನ ದಿನಗಳಲ್ಲಿ ಖಾದಿ ಬಟ್ಟೆಗೆ ಡಿಮ್ಯಾಂಡ್ ಹೆಚ್ಚುತ್ತಿದ್ದು, ಸರ್ಕಾರ ಸಹಿತ ಖಾದಿ ಬಟ್ಟೆಗಳ ಉತ್ಪಾದನೆ, ಮಾರಾಟಕ್ಕೆ ರಿಯಾಯಿತಿ ನೀಡುವದರ ಜತೆಗೆ ಅನೇಕ ಸೌಲಭ್ಯ ಕಲ್ಪಿಸಿ ಕೊಡುತ್ತಿದ್ದರೂ ಸಹಿತ ಸಂಬಂಧಿಸಿದ ಖಾದಿ ಮಂಡಳಿ, ಸಹಕಾರಿ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವುದು ಬಲವಾದ ಆರೋಪವಾಗಿದೆ.ದೋಟಿಹಾಳ ಖಾದಿ ಗ್ರಾಮದ್ಯೋಗ ಕೇಂದ್ರದ ಕಾರ್ಯದರ್ಶಿ ನಾರಾಯಣಪ್ಪ ಪತ್ತಾರ ನಿಧನಗೊಂಡ ಕಾರಣ ಕೇಂದ್ರದ ಕಾರ್ಯ ಸ್ಥಗಿತಗೊಂಡಿತು. ಈಗ ಆಡಳಿತ ಮಂಡಳಿಯ ಅವಧಿ ಮುಕ್ತಾಯಗೊಂಡು ಎರಡು ವರ್ಷ ಕಳೆದರೂ ಆಡಳಿತ ಮಂಡಳಿಯ ರಚನೆಗಾಗಲಿ, ಕೇಂದ್ರ ಪ್ರಾರಂಭ ಮಾಡುವದಕ್ಕೆ ಮುಂದೆ ಬರುತ್ತಿಲ್ಲ ಅಧಿಕಾರಿಗಳು.
ಖಾದಿ ಬಟ್ಟೆ ತಯಾರಿಕೆ: ಈ ಖಾದಿ ಗ್ರಾಮದ್ಯೋಗ ಕೇಂದ್ರದಲ್ಲಿ ಹಲವು ವರ್ಷಗಳ ಹಿಂದೆ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಕೇಂದ್ರದಲ್ಲಿ ಲುಂಗಿ, ಟವೆಲ್, ಧೋತಿ ಸೇರಿದಂತೆ ವಿವಿಧ ಬಟ್ಟೆ ತಯಾರಾಗುತ್ತಿದ್ದವು ಹಾಗೂ ಮೃತಪಟ್ಟ ಕಾರ್ಯದರ್ಶಿ ನಾರಾಯಣಪ್ಪ ಪತ್ತಾರ ತಮ್ಮ ಅಧಿಕಾರವಧಿಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಬಟ್ಟೆ ತಂದು ಮಾರಾಟ ಮಾಡುತ್ತಿದ್ದರು. ಆದರೆ ಈಗ ಉತ್ಪಾದನ ಕೇಂದ್ರ ಬಂದ್ ಆಗಿದ್ದು ಬಟ್ಟೆ ತಯಾರಿಕೆ ಹಾಗೂ ಮಾರಾಟ ಸ್ಥಗಿತಗೊಂಡಿದೆ.
ಇಲ್ಲಿ ಕೆಲಸ ಮಾಡುತ್ತಿದ್ದ ಪ್ರಹ್ಲಾದಾಚಾರ್ ಕಟ್ಟಿ ಎಂಬುವವರು ನಿವೃತ್ತಿ ನಂತರವೂ ಖಾದಿ ಉತ್ಪಾದನಾ ಕೇಂದ್ರ ಮುನ್ನಡೆಸಿಕೊಂಡು ಹೊರಟಿದ್ದಾರೆ. ಈ ಖಾದಿ ಉತ್ಪಾದನಾ ಕೇಂದ್ರಕ್ಕೆ ಸಂಬಂಧಿಸಿದಂತೆ 3ಎಕರೆಗೂ ಅಧಿಕ ಆಸ್ತಿ ಹೊಂದಿದ್ದು ಸರ್ಕಾರ ಕೇಂದ್ರದತ್ತ ಗಮನಹರಿಸಿ ಅಭಿವೃದ್ದಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ದೋಟಿಹಾಳ ಖಾದಿ ಗ್ರಾಮದ್ಯೋಗ ಕೇಂದ್ರ ಆರಂಭಿಸುವಲ್ಲಿ ಸಹಕಾರಿ ಇಲಾಖೆ ಹಾಗೂ ಖಾದಿ ಗ್ರಾಮದ್ಯೋಗ ಮಂಡಳಿಯವರ ನಿರ್ಲಕ್ಷತನ ತೋರುತ್ತಿದ್ದು, ಆಡಳಿತ ಮಂಡಳಿ ರಚನೆ, ಕಾರ್ಯದರ್ಶಿ ನೇಮಕ ಮಾಡಿ ಸ್ಥಗಿತಗೊಂಡ ಖಾದಿ ಕೇಂದ್ರ ಆರಂಭಿಸಬೇಕು ಕೆಲ ಕುಟುಂಬಗಳಿಗೆ ಕೆಲಸ ಕೊಟ್ಟಂತಾಗುತ್ತದೆ ಎಂದು ದೋಟಿಹಾಳ ನಿವಾಸಿ ಶ್ರೀನಿವಾಸ ಕಂಟ್ಲಿ ತಿಳಿಸಿದ್ದಾರೆ.