ಮಕ್ಕಳಿಗೆ ಉಚಿತ ಪಾಠ ಮಾಡುವ ಪಂಚರ್ ಅಂಗಡಿಯವ!

KannadaprabhaNewsNetwork |  
Published : Apr 09, 2026, 02:15 AM IST
ಬಳ್ಳಾರಿಯ ಗುಗ್ಗರಹಟ್ಟಿ ವೃತ್ತದಲ್ಲಿನ ಎಂ.ಪುರುಷೋತ್ತಮ ಅವರ ಪಂಚರ್ ಅಂಗಡಿಯಲ್ಲಿ ಮಗಳು ವಾಣಿಶ್ರೀ ಅವರು ತಂದೆ ಜೊತೆ ಪಂಚರ್ ಹಾಕುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದು.  | Kannada Prabha

ಸಾರಾಂಶ

ಎಂ. ಪುರುಷೋತ್ತಮ ಅವರ ವೃತ್ತಿ ಪಂಚರ್‌ ಹಾಕುವುದು ಆಗಿದ್ದರೂ ಸಮಯ ಬಿಡುವು ಮಾಡಿಕೊಂಡು ಸಮೀಪದ ಸರ್ಕಾರಿ ಶಾಲೆಯಲ್ಲಿ ಆಸಕ್ತಿಯಿಂದ ಪಾಠ ಮಾಡುತ್ತಾರೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಬದುಕಿಗೆ ಆಸರೆ ಪಂಚರ್‌ ಅಂಗಡಿ. ಸರ್ಕಾರಿ ಶಾಲೆ ಮಕ್ಕಳಿಗೆ ಪಾಠ ಮಾಡುವುದು ಹವ್ಯಾಸ...

ಇದು ನಗರದ ಹೊರ ವಲಯದ ಗುಗ್ಗರಹಟ್ಟಿಯ ವೃತ್ತದಲ್ಲಿ ಕಳೆದ ಎರಡು ದಶಕಗಳಿಂದ ಪಂಚರ್ ಶಾಪ್ ನಡೆಸುತ್ತಿರುವ ಎಂ. ಪುರುಷೋತ್ತಮ ಅವರ ಶಿಕ್ಷಣ ಪ್ರೀತಿಯ ಯಶೋಗಾಥೆ.

ವೃತ್ತಿ ಪಂಚರ್‌ ಹಾಕುವುದು ಆಗಿದ್ದರೂ ಸಮಯ ಬಿಡುವು ಮಾಡಿಕೊಂಡು ಸಮೀಪದ ಸರ್ಕಾರಿ ಶಾಲೆಯಲ್ಲಿ ಆಸಕ್ರತಿಯಿಂದ ಪಾಠ ಮಾಡುತ್ತಾರೆ. ಬಿಎ ಪದವೀಧರ ಆಗಿರುವ ಪುರುಷೋತ್ತಮ ಕನ್ನಡ ವಿಷಯಗಳಲ್ಲಿ ಹಿಡಿತ ಸಾಧಿಸಿದ್ಧಾರೆ. ಹಾಗಾಗಿ ಕಳೆದ 10 ವರ್ಷಗಳಿಂದ 4ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪಾಠ ಮಾಡುತ್ತಾರೆ. ಆಟ ಆಡಿಸುತ್ತಾರೆ, ಕರಾಟೆ ಕಲಿಸುತ್ತಾರೆ. ಮಕ್ಕಳೊಂದಿಗೆ ಬೆರೆಯುವುದು ಇವರಿಗೆ ಸಂತಸದ ಸಂಗತಿ.

ಶಾಲೆಯಲ್ಲಿ ದೈಹಿಕ ಶಿಕ್ಷಕರ ಕೊರತೆಯಿದ್ದು, ಮಕ್ಕಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವೆ. ಮಕ್ಕಳಿಗೆ ಪಾಠ ಹೇಳಿಕೊಡುವುದರ ಜೊತೆಗೆ, ಜೀವನಶಿಸ್ತು, ಜನಮುಖಿ ಮೌಲ್ಯಗಳು ಮತ್ತು ಆತ್ಮವಿಶ್ವಾಸ ಕುರಿತು ತಿಳಿಸಿಕೊಡುವೆ ಎನ್ನುತ್ತಾರೆ ಪುರುಷೋತ್ತಮ.

ಇಂಗ್ಲಿಷ್‌ ಮೀಡಿಯಂ ಮಕ್ಕಳು

ಹೀಗೆ ಪಾಠ ಮಾಡುವ ಎಂ. ಪುರುಷೋತ್ತಮ ತಮ್ಮ ಸ್ವಂತ ಮಗಳನ್ನೇ ಇಂಗ್ಲಿಷ್‌ ಮಾಧ್ಯಮದಿಂದ ಹೊರತಂದು ಈ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಇವರ ಮೂವರು ಮಕ್ಕಳ ಪೈಕಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನನ್ನು ಕನ್ನಡ ಮಾಧ್ಯಮದಲ್ಲಿಯೇ ಓದಿಸುತ್ತಿದ್ದಾರೆ.

ಹಾಗಾಗಿ ಇವರೀಗ ಎಸ್‌ಡಿಎಂಸಿ ಅಧ್ಯಕ್ಷರೂ ಆಗಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಹೆಚ್ಚಿಸಿದ್ದಾರೆ. ಈ ಮೊದಲು 300 ವಿದ್ಯಾರ್ಥಿಗಳಿದ್ದ ಶಾಲೆಯಲ್ಲೀಗ 500ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪಂಚರ್ ಹಾಕುವ ಪುತ್ರಿ

ಎಂ. ಪುರುಷೋತ್ತಮ ಅವರ ಮೂವರು ಮಕ್ಕಳ ಪೈಕಿ ಮೊದಲ ಪುತ್ರಿ ಎಂ. ಪಲ್ಲವಿ ಅವರು ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಕೊನೆಯ ಪುತ್ರ ಎಂ. ಶಿವಾಜಿ 4ನೇ ತರಗತಿ ಓದುತ್ತಿದ್ದಾನೆ. ಆದರ್ಶ ವಿದ್ಯಾಶಾಲೆಯಲ್ಲಿ ಓದುತ್ತಿರುವ ಎರಡನೇ ಮಗಳು ವಾಣಿಶ್ರೀ ರಜೆ ದಿನಗಳು ಹಾಗೂ ಬಿಡುವಿನ ವೇಳೆಯಲ್ಲಿ ತಂದೆಯ ಜೊತೆ ಸೈಕಲ್ ಹಾಗೂ ದ್ವಿಚಕ್ರ ವಾಹನಗಳಿಗೆ ಪಂಚರ್ ಹಾಕುತ್ತಾರೆ. ತಂದೆ ಹೊರಗಡೆ ಹೋದಾಗ ಪಂಚರ್ ಅಂಗಡಿಯ ಜವಾಬ್ದಾರಿ ತೆಗೆದುಕೊಳ್ಳುತ್ತಾಳೆ. ಮೂವರು ಮಕ್ಕಳು ಓದಿನಲ್ಲಿ ಮುಂದಿದ್ದು ಓದಿನ ಜೊತೆಗೆ ಪೋಷಕರ ನಿತ್ಯದ ಕೆಲಸಗಳಿಗೆ ಜೊತೆಯಾಗುತ್ತಾರೆ.

50 ಬಾರಿ ರಕ್ತದಾನ

ಎಂ.ಪುರುಷೋತ್ತಮ ರಕ್ತದಾನಿಯೂ ಹೌದು! ಈ ವರೆಗೆ 50 ಬಾರಿ ರಕ್ತದಾನ ಮಾಡಿ, ರಕ್ತದಾನದ ಮಹತ್ವ ಕುರಿತು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಗುಗರಹಟ್ಟಿಯ ಭಜನಾ ಮಂಡಳಿ ಸದಸ್ಯರಾಗಿ ನಿತ್ಯ ರಾತ್ರಿ ದೇವಸ್ಥಾನದಲ್ಲಿ ನಡೆಯುವ ಭಜನೆಯಲ್ಲಿ ಪಾಲ್ಗೊಳ್ಳುತ್ತಾರೆ.

10 ವರ್ಷಗಳಿಂದ ಬೋಧನೆ

ನಾನು ಸರ್ಕಾರಿ ಶಾಲೆಯಲ್ಲಿಯೇ ಓದಿದ್ದು. ಹೀಗಾಗಿ ನನಗೆ ನಮ್ಮೂರ ಶಾಲೆಯ ಬಗ್ಗೆ ಬಹಳ ಅಭಿಮಾನ. ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೆಟ್ಟು ಬೀಳಬಾರದು ಎಂದು ಕಳೆದ 10 ವರ್ಷಗಳಿಂದ ಪಠ್ಯ ಬೋಧನೆ ಮಾಡುತ್ತಿದ್ದೇನೆ ಎಂದು ಗುಗ್ಗರಹಟ್ಟಿಯ ಪಂಚರ್‌ ಅಂಗಡಿ ಮಾಲೀಕ ಎಂ. ಪುರುಷೋತ್ತಮ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವೇಶ್ವರ, ಶಂಕರಾಚಾರ್ಯ ಜಯಂತಿಗೆ ಸಿದ್ಧತೆ
ಶ್ರಮದ ಬೆವರಿನ ಫಲ ಶಾಶ್ವತ, ಸುಖದಾಯಕ: ರಂಭಾಪುರಿ ಶ್ರೀ