ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್. ಪಾಟೀಲರ ವ್ಯಕ್ತಿತ್ವ ಅನುಕರಣೀಯ

KannadaprabhaNewsNetwork |  
Published : Apr 04, 2026, 02:15 AM IST
ಹಾವೇರಿ ನಗರದ ಕೆ.ಎಫ್. ಪಾಟೀಲ ಉದ್ಯಾನವನದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್. ಪಾಟೀಲರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಸ್ವಾತಂತ್ರ್ಯ ಚಳವಳಿಗೆ ತಮ್ಮ ಶಿಷ್ಯ ಬಳಗವನ್ನೇ ಹುರಿದುಂಬಿಸುವ ಮೂಲಕ ರಾಷ್ಟ್ರೀಯ ಕಲ್ಪನೆ ಕಟ್ಟಿಕೊಟ್ಟ ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್. ಪಾಟೀಲರು ಹಾವೇರಿ ನೆಲಕ್ಕೆ ಧೈರ್ಯ ತುಂಬುವ ಶಕ್ತಿ ಇದೆ ಎಂದು ಇಡೀ ನಾಡಿಗೆ ತೋರಿಸಿಕೊಟ್ಟಿರುವರು.

ಹಾವೇರಿ: ಸ್ವಾತಂತ್ರ್ಯ ಚಳವಳಿಗೆ ತಮ್ಮ ಶಿಷ್ಯ ಬಳಗವನ್ನೇ ಹುರಿದುಂಬಿಸುವ ಮೂಲಕ ರಾಷ್ಟ್ರೀಯ ಕಲ್ಪನೆ ಕಟ್ಟಿಕೊಟ್ಟ ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್. ಪಾಟೀಲರು ಹಾವೇರಿ ನೆಲಕ್ಕೆ ಧೈರ್ಯ ತುಂಬುವ ಶಕ್ತಿ ಇದೆ ಎಂದು ಇಡೀ ನಾಡಿಗೆ ತೋರಿಸಿಕೊಟ್ಟಿರುವರು. ಸಜ್ಜನ ಮತ್ತು ಸಮಾಜಮುಖಿ ಚಿಂತನೆಯ ಅವರ ನಡೆ ಅನುಕರಣೀಯ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.ನಗರದ ಕೆ.ಎಫ್. ಪಾಟೀಲ ಉದ್ಯಾನವನದಲ್ಲಿ ಜರುಗಿದ ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್. ಪಾಟೀಲರ 121ನೇ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಉದ್ಯಾನವನಕ್ಕೆ ಪಾಟೀಲರ ನಾಮಕರಣ ಮಾಡಿರುವುದು ಸೂಕ್ತವಿದೆ. ಇಲ್ಲಿನ ನಿವಾಸಿಗಳು ವಾಯುವಿಹಾರದ ಕಾಲ್ನಡಿಗೆ ಸಂದರ್ಭದಲ್ಲಿ ನಮ್ಮ ನೆಲದ ಮಹನೀಯರ ತ್ಯಾಗ ಮತ್ತು ಬಲಿದಾನದ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಮುಂದಡಿ ಇಡಬೇಕಿದೆ. ಆಗ ಮಾತ್ರ ಅವರ ಹೋರಾಟ ಸಾರ್ಥಕ ರೂಪ ಪಡೆಯುತ್ತದೆ. ಮೈಲಾರ ಮಹಾದೇವಪ್ಪ ಹಾಗೂ ಸಂಗೂರ ಕರಿಯಪ್ಪ ಅವರಂಥವರಿಗೆ ಮಾರ್ಗದರ್ಶನ ಮಾಡಿದ ಪಾಟೀಲರು ಸದಾ ಸ್ಮರಣೀಯರು ಎಂದರು.ಅಧ್ಯಕ್ಷತೆ ವಹಿಸಿದ್ದ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಅವರನ್ನು ಮತ್ತೇ ಸ್ಮರಿಸಲು ಪ್ರಾಧಿಕಾರ ಆಸಕ್ತಿ ಹೊಂದಿದೆ. ಇದಕ್ಕೆ ಪೂರಕವೆಂಬಂತೆ ಪ್ರಾಧಿಕಾರ ವ್ಯಾಪ್ತಿಯ ಈ ಉದ್ಯಾನದ ಜೊತೆಗೆ ಈ ಬಡಾವಣೆಗೆ ಕೆ.ಎಫ್. ಪಾಟೀಲ ಬಡಾವಣೆ ಎಂದು ನಾಮಕರಣ ಮಾಡಲಾಗುವುದು. ಈ ಬಗ್ಗೆ ನಗರಸಭೆಯಲ್ಲಿ ಠರಾವು ಪಾಸು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ಮೂಲಕ ನಮ್ಮ ನೆಲದ ಮಹಾತ್ಮರನ್ನು ನೆನಪಿಸಿಕೊಳ್ಳಬಹುದು ಎಂದರು.ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ವಿಶಿಷ್ಟ ವ್ಯಕ್ತಿತ್ವದ ಕೆ.ಎಫ್. ಪಾಟೀಲರು ಸಂತನ ರೀತಿಯಲ್ಲಿ ಬದುಕು ಸವೆಸಿದರು. ಅವರು ಸ್ವಾತಂತ್ರ್ಯ ಹೋರಾಟದ ಬಳಿಕ ರಾಜಕಾರಣಿಯಾಗಿ, ಶಿಕ್ಷಣ ಪ್ರೇಮಿಯಾಗಿ, ಸಾಹಿತಿಯಾಗಿ ವಿಭಿನ್ನ ಸೇವೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಪಾಟೀಲರ ಎಲ್ಲ ಕೃತಿಗಳನ್ನು ಪ್ರದರ್ಶನಕ್ಕಿಡಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ನೀಡಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ್, ಅಬ್ದುಲ್ ಹುಬ್ಬಳ್ಳಿ, ಎ.ಎಚ್. ಕಬ್ಬಿಣಕಂಥಿಮಠ, ಸಿದ್ದೇಶ್ವರ ಹುಣಸಿಕಟ್ಟಿಮಠ, ಹಸೀನಾ ಹೆಡಿಯಾಲ, ಬಡಾವಣೆಯ ಆರ್.ವಿ.ಶಿಶುವಿನಹಾಳ, ಶಿವಾನಂದ ಹೊಸಮನಿ, ಈರಣ್ಣ ಅಗಸಿಬಾಗಿಲ, ಸಂತೋಷ ಮಡಿವಾಳರ, ಪ್ರಮೋದ ನವಲೆ, ಅಶೋಕ ಗದ್ದಿಗೌಡರ, ನಿಂಗಪ್ಪ ಬಾರಕೇರ, ದಿವಾಕರ ಮಾನೆ ಇದ್ದರು. ಇದೇ ಸಂದರ್ಭದಲ್ಲಿ ಕೆ.ಎಫ್.ಪಾಟೀಲರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗೂಳಪ್ಪ ಅರಳಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಷ್ಟಗಿಯಿಂದ ಬೆಂಗಳೂರಿಗೆ ರೈಲ್ವೆ ಓಡಿಸಲು ಮನವಿ
ಡಾ. ಆರ್.ಕೆ. ಕುಲಕರ್ಣಿ ಆರೋಗ್ಯ ಸೇವೆ ಸದಾ ಸ್ಮರಣೀಯ: ಅಶುತೋಷ್ ಕುಮಾರ್ ರಾಯ್