ಕನ್ನಡಪ್ರಭ ವಾರ್ತೆ ಯಾದಗಿರಿ
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ (ಹೈದರಾಬಾದ್ ಕರ್ನಾಟಕ ವಿಮೋಚನೆ) ಅಂಗವಾಗಿ, ಗುರುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗ ತನ್ನದೇ ಆದ ಇತಿಹಾಸ, ವಿಶೇಷತೆ ಹೊಂದಿದೆ. ಭಾರತವು 1947ರ ಆಗಸ್ಟ್ 15 ರಂದು ಸ್ವಾತಂತ್ರ್ಯಗೊಂಡರೆ, ನಿಜಾಮರ ಆಳ್ವಿಕೆಯಲ್ಲಿದ್ದ ಅಂದಿನ ಹೈದರಾಬಾದ್-ಕರ್ನಾಟಕ ಭಾಗವು 1948ರ ಸೆ.17ರಂದು ಸ್ವತಂತ್ರಗೊಂಡು ಭಾರತದ ಒಕ್ಕೂಟಕ್ಕೆ ವಿಲೀನವಾಯಿತು ಎಂದರು.
ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಹಾಗೂ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪೊಲೀಸ್ ಕಾರ್ಯಾಚರಣೆಯಿಂದಾಗಿ ಈ ಭಾಗ ಭಾರತದ ಒಕ್ಕೂಟಕ್ಕೆ ಸೇರಿತು. ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾಮಿ ರಾಮಾನಂದ ತೀರ್ಥರು, ಪಂ. ತಾರಾನಾಥರು, ವಿದ್ಯಾಧರ ಗುರೂಜಿ, ಸರ್ದಾರ್ ಶರಣಗೌಡ ಇನಾಂದಾರ್, ಚಂದ್ರಶೇಖರ ಪಾಟೀಲ ಮುಂತಾದ ಹಲವಾರು ಹೋರಾಟಗಾರರು ಚಳವಳಿ ಮಾಡಿ ಈ ಭಾಗವನ್ನು ಭಾರತದ ಒಕ್ಕೂಟಕ್ಕೆ ಸೇರಿಸಲು ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ್ದಾರೆ ಎಂದು ಸ್ಮರಿಸಿದರು.ಇನ್ನು, ಈ ಭಾಗಕ್ಕೆ ಈ ವಿಶೇಷ ಸ್ಥಾನಮಾನ ದೊರಕಿಸಲು ಹಲವು ಹೋರಾಟಗಾರರ ಶ್ರಮವಿದೆ. ವೈಜನಾಥ ಪಾಟೀಲ, ವಿಶೇಷವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿ ಸಂವಿಧಾನದಲ್ಲಿ ಹಿಂದುಳಿದ ಪ್ರದೇಶಗಳಿಗಾಗಿ ಅಳವಡಿಸಿದ ಈ ಅಂಶದಿಂದಾಗಿ, ಅಂದಿನ ಕೇಂದ್ರ ಸಚಿವ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ ಪ್ರಯತ್ನದ ಹಾಗೂ ಇಚ್ಛಾಶಕ್ತಿಯ, ಜನರ ಕಳಕಳಿ ಫಲವಾಗಿ ಸಂವಿಧಾನ ತಿದ್ದುಪಡಿ ಕಲಂ 371(ಜೆ) ಜಾರಿಯಾಗಿದ್ದು, ಈ ಭಾಗದ ಜನತೆಗೆ, ಕಟ್ಟಕಡೆಯ ವ್ಯಕ್ತಿಗೆ ಅಪಾರ ಲಾಭ ಹಾಗೂ ಕೊಡುಗೆ ನೀಡಿದೆ ಎಂದರು.
ಜನಹಿತಕ್ಕಾಗಿ ಗ್ಯಾರಂಟಿ ಯೋಜನೆ: ರಾಜ್ಯ ಸರ್ಕಾರವು ಪ್ರಗತಿಪರ ಕೆಲಸಗಳನ್ನು ಮಾಡುತ್ತಿದೆ. ಸಂಕುಚಿತ ಮನೋಭಾವ ಬೇಡವೆಂದ ಅವರು, ಬಡ ಜನರ ಹಾಗೂ ಸಾಮಾನ್ಯ ಜನರ ಹಿತ ಕಾಪಾಡಲು ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಬಡವರಪರ ಆಡಳಿತ ನೀಡಿದೆ. ಪ್ರತಿ ವರ್ಷ ₹50 ಸಾವಿರ ಕೋಟಿ ಮನೆ ಬಾಗಿಲಿಗೆ ತಲುಪಿಸುತ್ತಿದೆ. ರಾಜ್ಯ ಸರ್ಕಾರವು 30 ಸಾವಿರ ಹುದ್ದೆಗಳ ಭರ್ತಿಗೆ ಸಂಕಲ್ಪ ಮಾಡಿದ್ದು, ಈ ಭಾಗದ ಸಮೃದ್ಧಿಗಾಗಿ ಕಳಕಳಿ ಹೊಂದಿದೆ ಎಂದರು.ರೈತರಿಗೆ ಆತಂಕ ಬೇಡ: ತೀವ್ರ ಬರದ ಹಿನ್ನೆಲೆ ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದ ಅವರು, ಈಗಾಗಲೇ ಜಿಲ್ಲೆಯ ಶಹಾಪುರ ತಾಲೂಕನ್ನು ಬರಪೀಡಿತವೆಂದು ಘೋಷಿಸಲಾಗಿದ್ದು, ಯಾದಗಿರಿ, ಗುರುಮಠಕಲ್, ಸುರಪುರ, ವಡಗೇರಾ ತಾಲೂಕುಗಳೂ ಶೀಘ್ರ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲು ನಿರ್ಧರಿಸಲಾಗಿದೆ. ರೈತರೊಂದಿಗೆ ಸರ್ಕಾರ ಇದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಮತ ಭೇದವಿಲ್ಲದೆ ಪ್ರಾಮಾಣಿಕ ಕೆಲಸ ನಿರ್ವಹಿಸಲಿದ್ದಾರೆ ಎಂದರು.