ನಿರಂತರ ಆರುವ ಜ್ಯೋತಿ: ಕುಡಿಯುವ ನೀರಿಲ್ಲದೇ ಫಜೀತಿ..!

KannadaprabhaNewsNetwork |  
Published : Jul 09, 2026, 01:15 AM IST
ಹೂವಿನಹಡಗಲಿ ತಾಲೂಕಿನ ಸಿಂಗಟಾಲೂರು ಬ್ಯಾರೇಜ್‌ ಹಿನ್ನೀರಿನಲ್ಲಿ ಕುಡಿವ ನೀರಿನ ಜಾಕ್ವೆಲ್‌ .ಹೂವಿನಹಡಗಲಿ ತಾಲೂಕಿನ ಹೊನ್ನೂರು ಬಳಿ ಇರುವ ಹೂವಿನಹಡಗಲಿಗೆ ಕುಡಿವ ನೀರಿನ ಫಿಲ್ಟರ್‌ ಬೆಡ್‌ ವ್ಯವಸ್ಥೆ.  | Kannada Prabha

ಸಾರಾಂಶ

ದೀಪದ ಬುಡದಲ್ಲೆ ಕತ್ತಲು ಎಂಬಂತೆ ಪಕ್ಕದಲ್ಲೇ ತುಂಗಭದ್ರೆ ತುಂಬಿ ಹರಿದರೂ ಹೂವಿನಹಡಗಲಿ ಪಟ್ಟಣಕ್ಕೆ ಕುಡಿಯುವ ನೀರಿನ ತತ್ವಾರ ಮಾತ್ರ ತಪ್ಪಿಲ್ಲ. ಜಾಕ್‌ವೆಲ್‌ಗೆ ನಿರಂತರ ಜ್ಯೋತಿ ಲೈನ್‌ ಇದ್ದರೂ ಪದೇ ಪದೇ ವಿದ್ಯುತ್‌ ಕೈಕೊಡುತ್ತಿದ್ದು, ಪಟ್ಟಣದ ಜನ ನೀರಿಲ್ಲದೇ ಫಜೀತಿ ಪಡುತ್ತಿದ್ದಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ದೀಪದ ಬುಡದಲ್ಲೆ ಕತ್ತಲು ಎಂಬಂತೆ ಪಕ್ಕದಲ್ಲೇ ತುಂಗಭದ್ರೆ ತುಂಬಿ ಹರಿದರೂ ಹೂವಿನಹಡಗಲಿ ಪಟ್ಟಣಕ್ಕೆ ಕುಡಿಯುವ ನೀರಿನ ತತ್ವಾರ ಮಾತ್ರ ತಪ್ಪಿಲ್ಲ. ಜಾಕ್‌ವೆಲ್‌ಗೆ ನಿರಂತರ ಜ್ಯೋತಿ ಲೈನ್‌ ಇದ್ದರೂ ಪದೇ ಪದೇ ವಿದ್ಯುತ್‌ ಕೈಕೊಡುತ್ತಿದ್ದು, ಪಟ್ಟಣದ ಜನ ನೀರಿಲ್ಲದೇ ಫಜೀತಿ ಪಡುತ್ತಿದ್ದಾರೆ.

ತಾಲೂಕು ಕೇಂದ್ರ ಹೂವಿನಹಡಗಲಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. ಇಲ್ಲಿನ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕುಡಿಯುವ ನೀರು ಸೇರಿದಂತೆ ಬಳಕೆಗೆ ನದಿ ನೀರನ್ನೇ ನಂಬಿಕೊಂಡಿದ್ದಾರೆ. ಕಳೆದೊಂದು ವಾರದ ಹಿಂದೆ, ಎಲ್ಲ ವಾರ್ಡ್‌ಗಳಿಗೆ 4 ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿತ್ತು. ಆ ಸಂದರ್ಭದಲ್ಲಿ ಕುಡಿಯುವ ನೀರಿನ ಜಾಕ್‌ವೆಲ್‌ನ ನಿರಂತರ ಜ್ಯೋತಿ ಲೈನ್‌ಗೆ ರೈತರು ಅಕ್ರಮವಾಗಿ ಕೊಂಡಿ ಹಾಕಿರಲಿಲ್ಲ. ಆದರೀಗ ಎಲ್ಲ ಕಡೆಗೂ ಭತ್ತದ ನಾಟಿ ಮಾಡುವ ರೈತರು ಅವರಿಗೆ ನೀಡುವ 7 ತಾಸು ವಿದ್ಯುತ್‌ ಸಾಲದ ಕಾರಣ, ತಮ್ಮ ಮೋಟಾರ್‌ ಪಂಪ್‌ಸೆಟ್‌ಗಳನ್ನು ಆನ್‌ ಮಾಡಿಕೊಳ್ಳಲು ಅಕ್ರಮ ಸಂಪರ್ಕ ಮಾಡಿಕೊಂಡಿದ್ದಾರೆ. ಇದರಿಂದ ಪದೇ ಪದೇ ಕರೆಂಟ್‌ ಕೈಕೊಡುತ್ತಿದ್ದು, ಪಟ್ಟಣದ ಜನತೆಗೆ ಕುಡಿಯುವ ನೀರಿನ ಕುತ್ತು ಎದುರಾಗಿದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಜಾಕ್‌ವೆಲ್ ನಿರ್ಮಾಣ ಮಾಡಿ ಹೊನ್ನೂರು ಗ್ರಾಮದ ಹತ್ತಿರ ವಾಟರ್ ಫಿಲ್ಟರ್ ಪಾಯಿಂಟ್ ಮಾಡಲಾಗಿದೆ. ಈ ಜಾಕ್ವೆಲ್‌ಗೆ ಪ್ರತ್ಯೇಕವಾಗಿ ₹470564 ವೆಚ್ಚದಲ್ಲಿ ನಿರಂತರ ಜ್ಯೋತಿಯ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಜತೆಗೆ ₹58162 ಸೇವಾ ತೆರಿಗೆಯೂ ಪುರಸಭೆಯಿಂದ ಪಾವತಿಯಾಗಿದೆ. ಆದರೂ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಇಲ್ಲದೇ ಪದೇ ಪದೇ ಕುಡಿಯುವ ನೀರಿನ ಮೋಟಾರ್‌ ಪಂಪ್‌ಸೆಟ್‌ ಬಂದ್‌ ಆಗುತ್ತಿದೆ. ಇದರಿಂದ ಕುಡಿಯುವ ನೀರಿಗೆ ನಿಯೋಜನೆಗೊಂಡ ಪುರಸಭೆ ಸಿಬ್ಬಂದಿ ರೋಸಿ ಹೋಗಿದ್ದಾರೆ. ಕಳೆದ 4 ದಿನಗಳಿಂದ ಸರಿಯಾಗಿ ಮೋಟಾರ್‌ ಆನ್‌ ಇಲ್ಲದ ಟ್ಯಾಂಕ್‌ನಲ್ಲಿ ನೀರೇ ಸಂಗ್ರಹವಾಗುತ್ತಿಲ್ಲ.

ವಿದ್ಯುತ್ ಸಂಪರ್ಕ ಲೈನ್‌ಗೆ ರೈತರು ಅಕ್ರಮವಾಗಿ ಕೊಂಡಿ ಹಾಕಿ ವಿದ್ಯುತ್ ಸಂಪರ್ಕ ಪಡೆದ ಕಾರಣ ಓವರ್ ಲೋಡ್ ಆಗಿ ವಿದ್ಯುತ್ ವ್ಯತ್ಯಯ ಆಗುತ್ತಿದೆ. ಹಾಗಾಗಿ, ವಿದ್ಯುತ್ ವ್ಯತ್ಯಯ ಆಗುತ್ತಿರುವುದರಿಂದ ಜು.7ರಂದು ಪುರಸಭೆಯ ಮುಖ್ಯಾಧಿಕಾರಿಯು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಪತ್ರ ವ್ಯವಹಾರ ಮಾಡಿದ್ದಾರೆ.

ಪಟ್ಟಣದಲ್ಲಿ ನೀರಿನ ಬಳಕೆ ಹೆಚ್ಚಿದೆ. ಜನರ ಬೇಡಿಕೆಗೆ ತಕ್ಕಂತೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ, ಜಾಕ್ವೆಲ್‌ಗೆ ನಿರಂತರ ಜ್ಯೋತಿ ವಿದ್ಯುತ್‌ ಸಂಪರ್ಕವಿದೆ. ಆ ಲೈನ್‌ಗೆ ಅಕ್ರಮವಾಗಿ ಕೊಂಡಿ ಹಾಕಿಕೊಂಡ ಪರಿಣಾಮ ಓವರ್‌ ಲೋಡ್‌ ಆಗಿ ಪದೇ ಪದೇ ಮೋಟಾರ್‌ ಬಂದ್‌ ಆಗುತ್ತಿದೆ. ಇದರಿಂದ ನೀರಿನ ತೊಂದರೆಯಾಗಿದ್ದು, ಈ ಕುರಿತು ಜೆಸ್ಕಾಂಗೆ ಪತ್ರ ಬರೆದಿದ್ದೇವೆ ಎಂದು ಹೂವಿನಹಡಗಲಿ ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ತಿಳಿಸಿದ್ದಾರೆ.ನಿರಂತರ ಕರೆಂಟ್‌ ನೀಡಿದ್ದೇವೆ. ಆದರೆ, ಗಾಳಿ ಹೆಚ್ಚಾಗಿತ್ತು. ಇದರಿಂದ 2-3 ದಿನ ತೊಂದರೆಯಾಗಿದೆ. ಲೈನ್‌ಮ್ಯಾನ್‌ ರಜೆ ಇದ್ದ ಕಾರಣ ಕೆಲಸ ಮಾಡಲು ಯಾರೂ ಇರಲಿಲ್ಲ. ಈಗ ಎಲ್ಲವೂ ಸರಿಯಾಗಿದೆ. ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಹೂವಿನಹಡಗಲಿ ಜೆಸ್ಕಾಂ ಎಇಇ ಕೇದಾರನಾಥ ಗದುಗಿನ,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಡಕೆ ಸಾಗಾಟಕ್ಕೆ ಅಡ್ಡಿ : ಮಹಾ ಸಿಎಂ ಜೊತೆ ಸಭೆ
ಅಂಗನವಾಡಿ ಕೇಂದ್ರಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ