ಅಚ್ಚುಕಟ್ಟು ಪ್ರದೇಶಗಳಿಗೆ ಇಂದಿನಿಂದ ವಿವಿ ಸಾಗರ ನೀರು

KannadaprabhaNewsNetwork |  
Published : Jun 27, 2025, 12:48 AM IST
ಚಿತ್ರ 3 | Kannada Prabha

ಸಾರಾಂಶ

ನೀರು ಹರಿಸುವ ಹಿನ್ನೆಲೆಯಲ್ಲಿ ನಾಲೆಗಳನ್ನು ಸ್ವಚ್ಛಗೊಳಿಸುತ್ತಿರುವುದು.

ವಿವಿ ಸಾಗರ ಜಲಾಶಯದಲ್ಲಿ 126 ಅಡಿ ನೀರಿನ ಸಂಗ್ರಹ । 12,135 ಹೆಕ್ಟೇರ್ ಪ್ರದೇಶಕ್ಕೆ ನೀರು

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆ ಇಂದಿನಿಂದ 30 ದಿನಗಳ ಕಾಲ ವಿವಿ ಸಾಗರದ ನೀರು ಹರಿಯಲಿದೆ.

ಶುಕ್ರವಾರ ಮದ್ಯರಾತ್ರಿಯಿಂದಲೇ ವಾಣಿ ವಿಲಾಸ ಸಾಗರದ ನೀರು ಕಾಲುವೆಗಳಿಗೆ ಹರಿಯಲು ಪ್ರಾರಂಭಿಸಲಿದೆ. ಇನ್ನು ಒಂದು ತಿಂಗಳ ಕಾಲ ತಾಲೂಕಿನ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಲ್ಲಿ ವಿವಿ ಸಾಗರದ ನೀರಿನ ಕಲರವ ಕೇಳಲಿದೆ. 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತೀ ಕಡಿಮೆ ಮಳೆಯಾಗಿ ವಿವಿ ಸಾಗರ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ತೋಟಗಾರಿಕೆ ಹಾಗೂ ಇತರೆ ಬೆಳೆಗಳಿಗೆ ನೀರು ಅವಶ್ಯಕವಾಗಿದ್ದು ನೀರು ಹರಿಸಿ ಎಂದು ರೈತ ಸಂಘಟನೆಗಳವರು ಮಾಡಿದ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಜೂನ್‌ 23 ರಂದು ಸಭೆ ನಡೆಸಿ ನೀರು ಹರಿಸುವ ತೀರ್ಮಾನ ಕೈಗೊಂಡರು. ಪ್ರಸ್ತುತ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ 126 ಅಡಿಗಳಷ್ಟು ನೀರಿನ ಸಂಗ್ರಹವಿದ್ದು ಅಚ್ಚುಕಟ್ಟು ಪ್ರದೇಶದಲ್ಲಿ ಹಾಲಿ ಇರುವ ತೋಟಗಾರಿಕೆ ಮತ್ತು ಇತರೆ ಕೃಷಿ ಬೆಳೆಗಳಿಗೆ 1ನೇ ಹದ ನೀರು ಹರಿಸಲಾಗುತ್ತಿದೆ.

ಸುಮಾರು 12,135 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲಾಗುತ್ತದೆ. 6 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ತೋಟಗಾರಿಕೆ ಬೆಳೆಗಳಿಗೆ ನೀರು ಹಾಯಲಿದೆ. ನಾಲೆಗಳಲ್ಲಿ ನೀರು ಹರಿಸುವುದರಿಂದ ನಾಲೆಯ ಅಕ್ಕಪಕ್ಕದ ಎಲ್ಲಾ ಗ್ರಾಮಗಳ ಅಂತರ್ಜಲ ಮಟ್ಟವು ಸುಧಾರಿಸಲಿದ್ದು ಕುಡಿಯುವ ನೀರಿಗೂ ಅನುಕೂಲವಾಗಲಿದೆ.

ಜೂನ್‌ 27 ರಿಂದ ಜುಲೈ27 ರವರೆಗೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಯಲಿದ್ದು ಅಚ್ಚುಕಟ್ಟು ವ್ಯಾಪ್ತಿಯ ಹಳ್ಳಿಗಳ ಜನ ಜಾನುವಾರುಗಳ ಬಗ್ಗೆ ಮುಂಜಾಗರೂಕತೆ ವಹಿಸಬೇಕು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಪ್ರತಿಯೊಂದು ಉಪ ಕಾಲುವೆಯಲ್ಲೂ ನೀರಿನ ಹಂಚಿಕೆಯ ಜವಾಬ್ದಾರಿಯನ್ನು ರೈತ ಸಮಿತಿ ಸದಸ್ಯರು ನಿರ್ವಹಿಸಬೇಕು. ನೀರು ಹರಿಸಿದಾಗ ಕಾಲುವೆಯ ಕೊನೆಗಡಿಯ ಅಚ್ಚುಕಟ್ಟು ಪ್ರದೇಶಗಳಿಗೆ ಮೊದಲು ನೀರು ಹರಿಸಬೇಕು. ಯಾವುದೇ ಕಾರಣಕ್ಕೂ ನೀರು ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ರೈತರು ನೀರು ಪೋಲು ಮಾಡಬೇಡಿ:

ವಿಶ್ವೇಶ್ವರಯ್ಯ ಜಲ ನಿಗಮದ ಎಇಇ ಜಯಕುಮಾರ್ ಮಾಹಿತಿ ನೀಡಿ ತಾಲೂಕಿನ 12 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶಗಳಿಗೆ ನೀರು ಹರಿಯಲಿದೆ. ಸುಮಾರು 6500 ಸಾವಿರ ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆಗಳಿಗೆ ನೀರು ಸಿಗಲಿದೆ. ನೀರು ಸರಾಗವಾಗಿ ಹರಿಯಲು ಕಾಲುವೆಗಳನ್ನು ಸಾಧ್ಯವಾದಷ್ಟು ಅಚ್ಚುಕಟ್ಟು ಮಾಡಲಾಗಿದೆ. ಒಂದು ಹದ ನೀರು ಹರಿಸಲು ಸುಮಾರು ಒಂದೂವರೆ ಟಿಎಂಸಿ ಯಷ್ಟು ನೀರು ಬೇಕಾಗುತ್ತದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವ ನಿರ್ಧಾರ ತೆಗೆದುಕೊಂಡಿದ್ದು ಜನ ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ರೈತರು ನೀರು ಪೋಲು ಮಾಡದಂತೆ ತಮ್ಮ ಜಮೀನುಗಳಿಗೆ ಹಾಯಿಸಿಕೊಳ್ಳಬೇಕು ಎಂದರು.--

ಅಂಬೇಡ್ಕರ್ ಕಾಲೇಜ್ ರಸ್ತೆಯಲ್ಲಿನ ನಾಲೆ ದುಸ್ಥಿತಿ:

ಹಿರಿಯೂರು ನಗರದ ಟಿಬಿ ವೃತ್ತದಿಂದ ಅಂಬೇಡ್ಕರ್ ಕಾಲೇಜ್ ರಸ್ತೆ ಪಕ್ಕದ ವಿವಿ ಸಾಗರದ ನಾಲೆ ಕಸ ಹಾಗೂ ಕೊಚ್ಛೆಯಿಂದ ನಾರುತ್ತಿದ್ದು ಆಸುಪಾಸಿನ ಮನೆಗಳವರಿಗೆ, ಕಾಲೇಜಿನ ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆಯಾಗಿದೆ. ಸೊಳ್ಳೆಗಳ ತವರು ಮನೆಯಾಗಿರುವ ಈ ನಾಲೆಯನ್ನು ಅಚ್ಚುಕಟ್ಟು ಮಾಡಬೇಕಾದ ಅನಿವಾರ್ಯತೆ ಇದೆ. ವಿಪರ್ಯಾಸವೆಂದರೆ ಇಂದಿನಿಂದ ವಿವಿ ಸಾಗರದ ತೂಬು ತೆರೆದಿದ್ದು ಹಳ್ಳಿಗಳ ರೈತರ ಜಮೀನುಗಳಿಗೆ ಈ ಕಸ ಮತ್ತು ಕೊಚ್ಛೆ ಸರಾಗವಾಗಿ ಹರಿದು ಹೋಗಲಿದೆ. ನಾಲೆಗಳ ಸ್ವಚ್ಛತೆ ಮಾಡಿ ನೀರು ಹರಿಸುತ್ತಿದ್ದೇವೆ ಎಂದ ಅಧಿಕಾರಿಗಳು ಇತ್ತಲೂ ಗಮನಿಸಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ