ಕನ್ನಡಪ್ರಭ ವಾರ್ತೆ ಅರಸೀಕೆರೆ
ರಾಯಲ್ ಪದವಿ ಕಾಲೇಜಿನ ವತಿಯಿಂದ ನೂತನ ವಿದ್ಯಾರ್ಥಿಗಳಿಗಾಗಿ ವೆಂಕಟೇಶ್ವರ ಕಲಾಭವನದಲ್ಲಿ ಆಯೋಜಿಸಿದ್ದ ಫ್ರೆಶರ್ಸ್ ಡೇ 2026 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ದೇಶದಲ್ಲಿ ಉತ್ತಮ ಉದ್ಯೋಗಾವಕಾಶಗಳು ಲಭ್ಯವಿದ್ದು, ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು. ಜೀವನದಲ್ಲಿ ಗುರಿ ಸಾಧಿಸುವ ಸಂದರ್ಭದಲ್ಲಿ ಎದುರಾಗುವ ಕ್ಷಣಿಕ ಆಸೆ-ಆಮಿಷಗಳಿಗೆ ಒಳಗಾಗಿ ಅಮೂಲ್ಯವಾದ ಭವಿಷ್ಯವನ್ನು ಕಳೆದುಕೊಳ್ಳಬಾರದು. ಸಮಯದ ಸದುಪಯೋಗ, ಶಿಸ್ತು ಹಾಗೂ ನಿರಂತರ ಪರಿಶ್ರಮವೇ ಯಶಸ್ಸಿನ ಪ್ರಮುಖ ಮೆಟ್ಟಿಲುಗಳು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಕೃಷ್ಣವೇಣಿ ಮತ್ತು ಲೇಖನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ, ಎಲ್ಲರ ಗಮನ ಸೆಳೆದವು. ಕಾರ್ಯಕ್ರಮವು ಸಂಭ್ರಮ ಹಾಗೂ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಯದರ್ಶಿ ಉಷಾ ಭೂಪಯ್ಯ, ಪ್ರಾಂಶುಪಾಲರಾದ ಕೆ. ಎಸ್. ಮಂಜುನಾಥ್, ಹಿರಿಯ ಉಪನ್ಯಾಸಕರಾದ ಕೆ.ಸಿ. ನಟರಾಜ್, ಉಪನ್ಯಾಸಕರಾದ ಮಾಲತೇಶ್, ಅಮೃತ್, ಸಚಿನ್, ಹೇಮಾ, ಮಧುರಾ, ರೂಮಾನಾ ಹಾಗೂ ಬೃಂದಾ ಸೇರಿದಂತೆ ಬೋಧಕ ಸಿಬ್ಬಂದಿ, ವಿದ್ಯಾರ್ಥಿ ಮುಖಂಡರಾದ ತರುಣ್ ನಾಯಕ್ ಮತ್ತು ಸ್ನೇಹ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.