ನನ್ನ ಮಗ ಅವಳನ್ನು ನಾಲ್ಕು ವರ್ಷಗಳ ಹಿಂದೆಯೇ ಮರೆತಿದ್ದ..: ತಂದೆಯ ಕಣ್ಣೀರಿನ ಮಾತು
ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾನನ್ನ ಮಗ ನಾಲ್ಕು ವರ್ಷಗಳ ಹಿಂದೆಯೇ ರಮ್ಯಾಳನ್ನು ಮರೆತಿದ್ದ. ಆಕೆಯ ತಂದೆ-ತಾಯಿ ಈ ಸಂಬಂಧವನ್ನು ಇಲ್ಲಿಗೇ ಬಿಡಿ ಎಂದು ಹೇಳಿದ ಬಳಿಕ ನಾವು ಕೂಡ ಮಗನಿಗೆ ಅದನ್ನೇ ತಿಳಿಸಿದ್ದೆವು. ಆ ನಂತರ ಆತ ಆಕೆಯ ಸಂಪರ್ಕಕ್ಕೂ ಹೋಗಿರಲಿಲ್ಲ. ತನ್ನ ಕೆಲಸ ಮಾಡಿಕೊಂಡು ಶಾಂತವಾಗಿ ಬದುಕುತ್ತಿದ್ದ. ಆದರೆ ಏಕಾಏಕಿ ಇಂತಹ ನಿರ್ಧಾರ ಯಾಕೆ ತೆಗೆದುಕೊಂಡ ಎನ್ನುವುದು ನಮಗೀಗಲೂ ಅರ್ಥವಾಗುತ್ತಿಲ್ಲ...
ನಮ್ಮ ಊರಿನಲ್ಲಿ ಅವನ ವಿರುದ್ಧ ಯಾರೂ ಒಂದು ಕೆಟ್ಟ ಮಾತನ್ನೂ ಆಡಿರಲಿಲ್ಲ. ಯಾವುದೇ ಅಪವಾದವೂ ಇರಲಿಲ್ಲ. ಎಲ್ಲರೊಂದಿಗೆ ಒಳ್ಳೆಯವನಾಗಿಯೇ ಬದುಕುತ್ತಿದ್ದ. ಇಂತಹ ದುರಂತ ಹೇಗೆ ನಡೆಯಿತು ಎಂಬುದು ನಮಗೂ ನಂಬಲಾಗುತ್ತಿಲ್ಲ. ಈಗ ಏನು ಮಾಡಬೇಕು ಎನ್ನುವುದೇ ತೋಚುತ್ತಿಲ್ಲ ಎಂದು ಭಾವುಕರಾದರು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಯುವತಿಯ ತಪ್ಪಿದೆಯೋ ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ ಯಾವುದೇ ಕಾರಣಕ್ಕೂ ಇಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದಾಗಿತ್ತು. ಈಗ ಅವನು ನಮ್ಮ ಜೊತೆಯಲ್ಲಿ ಇಲ್ಲ. ನಾವು ಇದ್ದೂ ಇಲ್ಲದಂತಾಗಿದ್ದೇವೆ ಎಂದು ದುಃಖ ತಡೆಯಲಾರದೆ ಮರುಗಿದರು.
ಭಾನುವಾರ ತಡರಾತ್ರಿ ಸುಮಾರು 1.45ಕ್ಕೆ ನಾಗೇಂದ್ರನ ಮೃತದೇಹವನ್ನು ಸ್ವಗ್ರಾಮ ಹೆಬ್ಬುಳಕ್ಕೆ ತರಲಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಬಂಧು-ಬಳಗದವರು ಮನೆ ಮುಂದೆ ಜಮಾಯಿಸಿ ಮುಚ್ಚಿದ ಪ್ಲಾಸ್ಟಿಕ್ ಚೀಲದಲ್ಲಿದ್ದ ನಾಗೇಂದ್ರನ ಅಂತಿಮ ದರ್ಶನ ಪಡೆದರು. ಬಳಿಕ ರಾತ್ರಿ ಸುಮಾರು 2.15ಕ್ಕೆ ತಂದೆ ತಿಮ್ಮಪ್ಪ ಗೌಡ ಕಣ್ಣೀರಿನಲ್ಲೇ ವಿಧಿವಿಧಾನ ನೆರವೇರಿಸಿ ಮಗನ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಲ್ಲಿದ್ದವರ ಮನಕಲಕುವ ದೃಶ್ಯ ಎಲ್ಲರ ಕಣ್ಣನ್ನೂ ತೇವಗೊಳಿಸಿತು.