ನರಗುಂದ: ಕೊಲ್ಲಿ ದೇಶಗಳಲ್ಲಿನ ಯುದ್ಧದ ಪರಿಣಾಮ ಪೆಟ್ರೋಲ್, ಡೀಸೆಲ್ ಅಭಾವ ಉಂಟಾಗಬಹುದು, ದರದಲ್ಲಿ ವ್ಯತ್ಯಾಸವಾಗಬಹುದು ಎಂಬ ವದಂತಿ ಹಿನ್ನೆಲೆ ಮಂಗಳವಾರ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ಸಾಲು ಕಂಡುಬಂದಿತು.
ಈ ಕುರಿತು ತಹಸೀಲ್ದಾರ್ ಶ್ರೀಶೈಲ ತಳವಾರ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯಲ್ಲಿ ಸಮಸ್ಯೆಯಾಗಿಲ್ಲ. ಬೇಡಿಕೆಗೆ ಅನುಸಾರವಾಗಿ ತಾಲೂಕಿಗೆ ಇಂಧನ ಪೂರೈಕೆಯಾಗುತ್ತಿದೆ. ಗ್ರಾಹಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ನರಗುಂದ: ಪ್ರತಿನಿತ್ಯ ಜೀವನಕ್ಕೆ ಅವಶ್ಯವಿರುವ ಅಡುಗೆ ಅನಿಲ ಖರೀದಿ ಮಾಡಲು ಜನರು ಸರದಿಯಲ್ಲಿ ನಿಂತರೂ ಗ್ಯಾಸ್ ಸಿಲಿಂಡರ್ ಸಿಗದೆ ಪರದಾಡುತ್ತಿದ್ದಾರೆ.ಮಂಗಳವಾರ ಪಟ್ಟಣದ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿ ಮುಂದೆ ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದ ನೂರಾರು ಜನರು ಖಾಲಿ ಸಿಲಿಂಡರ್ ತೆಗೆದುಕೊಂಡು ಬಂದಿದ್ದರು. ಅಡುಗೆ ಅನಿಲ ಸಿಗದೇ ಬೇಸರ ಹೊರಹಾಕಿದರು. ಗ್ಯಾಸ್ ಬುಕ್ ಮಾಡಿ 10- 12 ದಿನವಾದರೂ ಅಡುಗೆ ಅನಿಲ ಸಿಗುತ್ತಿಲ್ಲ ಎಂದು ಕೆಲವು ಗ್ರಾಹಕರು ಅಳಲು ತೋಡಿಕೊಂಡರು.ಮನೆ ಬಳಕೆ ಸಿಲಿಂಡರ್ ಸಿಗದೆ ಜನ ಪರದಾಡಿದರೆ, ಮತ್ತೊಂದು ಕಡೆ ಹೋಟೆಲ್‌ಗಳ ಮಾಲೀಕರ ಪರಿಸ್ಥಿತಿ ಬಹಳ ಕಷ್ಟಕ್ಕೆ ಸಿಲುಕಿದೆ. ಬಹುತೇಕ ಹೋಟೆಲ್‌ಗಳಲ್ಲಿ ಕಟ್ಟಿಗೆ ಒಲೆಯಲ್ಲಿ ಅಡುಗೆ ತಯಾರಿಸುವ ಸ್ಥಿತಿ ನಿರ್ಮಾಣವಾಗಿದೆ.
ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿಯಲ್ಲಿ ತಾಲೂಕಿನ 1900 ಜನರು ಸಿಲಿಂಡರ್ ಖರೀದಿಗೆ ಬುಕ್ಕಿಂಗ್ ಮಾಡಿದ್ದಾರೆ. ಆದರೆ ಇಂಡಿಯನ್ ಆಯಿಲ್ ಗ್ಯಾಸ್ ಕಂಪನಿಯಿಂದ ನಿತ್ಯ 320 ಸಿಲಿಂಡರ್ ಮಾತ್ರ ಬರುತ್ತಿವೆ ಎಂದು ಗ್ಯಾಸ್ ಏಜೆನ್ಸಿ ಮಾಲೀಕ ಕೋರಿ ತಿಳಿಸಿದರು.