ಪ್ರಸ್ತುತ ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗ ಮತ್ತು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗ ನಡುವೆ ಹಂಚಿಕೆಯಾಗಿದ್ದ ಮಂಗಳೂರು ರೈಲ್ವೆ ಜಾಲ ಇದೀಗ ಪೂರ್ತಿಯಾಗಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕರಾವಳಿ ಜಿಲ್ಲೆಗಳ ಜನತೆಯ ಬಹು ದಿನಗಳ ಬೇಡಿಕೆ ಈಡೇರಿದೆ ಹಾಗೂ ತನ್ಮೂಲಕ ಇಲ್ಲಿನ ರೈಲ್ವೆ ಬಳಕೆದಾರರ ದೀರ್ಘ ಕಾಲದ ಕನಸು ನನಸಾಗುತ್ತಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಸಂತಸ ವ್ಯಕ್ತಪಡಿಸಿದೆ.
ಉಡುಪಿ: ಪ್ರಸ್ತುತ ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗ ಮತ್ತು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗ ನಡುವೆ ಹಂಚಿಕೆಯಾಗಿದ್ದ ಮಂಗಳೂರು ರೈಲ್ವೆ ಜಾಲ ಇದೀಗ ಪೂರ್ತಿಯಾಗಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕರಾವಳಿ ಜಿಲ್ಲೆಗಳ ಜನತೆಯ ಬಹು ದಿನಗಳ ಬೇಡಿಕೆ ಈಡೇರಿದೆ ಹಾಗೂ ತನ್ಮೂಲಕ ಇಲ್ಲಿನ ರೈಲ್ವೆ ಬಳಕೆದಾರರ ದೀರ್ಘ ಕಾಲದ ಕನಸು ನನಸಾಗುತ್ತಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಸಂತಸ ವ್ಯಕ್ತಪಡಿಸಿದೆ.
ಮಂಗಳೂರಿನ ಮಾತ್ರವಲ್ಲದೆ ಪಕ್ಕದ ಉಡುಪಿ ಜಿಲ್ಲೆಯ ಜನತೆಯ ರೈಲ್ವೆ ಸೌಕರ್ಯಗಳ ಮಟ್ಟಿಗೆ ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಈ ಬದಲಾವಣೆಯಿಂದ ಮಂಗಳೂರು ರೈಲ್ವೆ ವ್ಯಾಪ್ತಿಯ ಆಡಳಿತಾತ್ಮಕ ಗೊಂದಲಗಳು ನಿವಾರಣೆಯಾಗಲಿವೆ. ಇಲಾಖೆಗಳ ನಡುವಿನ ಸಮನ್ವಯತೆ ಹೆಚ್ಚಲಿದ್ದು, ಪ್ರಯಾಣಿಕರ ಕುಂದು ಕೊರತೆಗಳ ಶೀಘ್ರ ವಿಲೇವಾರಿ ಹಾಗೂ ಕರಾವಳಿ ಭಾಗದ ರೈಲ್ವೆ ಮೂಲ ಸೌಕರ್ಯ ವಿಸ್ತರಣೆಗೆ ಮತ್ತು ಸಂಪರ್ಕದ ಅಭಿವೃದ್ಧಿಗೆ ಇದು ನಾಂದಿಯಾಗಲಿದೆ. ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ನೈಋತ್ಯ ರೈಲ್ವೆ ವಲಯದೊಂದಿಗೆ ಕೊಂಕಣ ರೈಲ್ವೆಯನ್ನು ವಿಲೀನಗೊಳಿಸಲು ದಾರಿ ಸುಗಮವಾದಂತಾಗಿದೆ ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ. 2024ರ ಜೂನ್‌ನಲ್ಲಿ ಎನ್‌ಡಿಎ 3.0 ಸರಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಈ ವಿಚಾರವನ್ನು ಆದ್ಯತೆಯ ಮೇರೆಗೆ ಪರಿಗಣಿಸುವಂತೆ ಮಂಗಳೂರು, ಉಡುಪಿ -ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸಂಸದರು ಸತತವಾಗಿ ಒತ್ತಡ ಹೇರುತ್ತಾ ಬಂದಿದ್ದರು. ಕೇಂದ್ರ ರೈಲ್ವೆ ಸಚಿವ ಆಶ್ವಿನಿ ವೈಷ್ಣವ್ ಅವರ ಗಮನಕ್ಕೂ ಈ ವಿಚಾರವನ್ನು ಆಗಾಗ್ಗೆ ತಂದು, ಲಭ್ಯವಿದ್ದ ಎಲ್ಲ ಸಂಸದೀಯ ಮತ್ತು ಸಾಂಸ್ಥಿಕ ವೇದಿಕೆಗಳಲ್ಲೂ ಈ ಬಗ್ಗೆ ಧ್ವನಿ ಎತ್ತಲಾಗಿತ್ತು. ಜೊತೆಗೆ ಅಂದಿನಿಂದಲೂ ಈ ವಿಷಯದ ಕುರಿತಾಗಿ ಉಭಯ ಸಂಸದರೂ ಬೆಂಬಿಡದೆ ಶ್ರಮಿಸಿದ್ದರ ಫಲವಾಗಿ ಈ ಐತಿಹಾಸಿಕ ಆದೇಶ ಹೊರಬಿದ್ದಿದೆ. ಇದೀಗ ಈ ಪ್ರಮುಖ ಬೇಡಿಕೆ ಈಡೇರುತ್ತಿರುವುದು ಉಭಯ ಜಿಲ್ಲೆಗಳ ಜನತೆಗೆ ಮತ್ತು ರೈಲ್ವೆ ಬಳಕೆದಾರರಿಗೆ ಅತ್ಯಂತ ಖುಷಿ ತಂದಿದೆ.
ಕೇಂದ್ರ ರೈಲ್ವೆ ಸಚಿವರು ನಮ್ಮ ಕರಾವಳಿಯ ಸಂಸದರ ಬೇಡಿಕೆಗೆ ಸ್ಪಂದಿಸಿ ತ್ವರಿತ ಮತ್ತು ಸಕಾರಾತ್ಮಕ ಕ್ರಮ ಕೈಗೊಂಡ ನಿಲುವಿಗೆ ಕರಾವಳಿಯ ಸಮಸ್ತ ಜನತೆಯ ಪರವಾಗಿ ಉಡುಪಿ ಜಿಲ್ಲಾ ಬಿಜೆಪಿ ಧನ್ಯವಾದ ಸಲ್ಲಿಸಿದೆ.
ಈ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮತ್ತು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ವೈ. ರಾಘವೇಂದ್ರ ಅವರಿಗೆ ಉಡುಪಿ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.