ಗ್ರಾಮದೇವಿಯ ಜಾತ್ರೆಗೆ ಸಂಪೂರ್ಣ ಸಹಕಾರ

KannadaprabhaNewsNetwork |  
Published : Aug 10, 2025, 02:16 AM IST
ಫೋಟೋ ಶೀರ್ಷಿಕೆ ೯ಎಸ್‌ಡಿಟಿ೨ಸವದತ್ತಿಯ ಮಾಮನಿ ಕಲ್ಯಾಣ ಮಂಟಪದಲ್ಲಿ ಗ್ರಾಮದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಮಾತನಾಡಿದರು. ಶಾಸಕ ವಿಶ್ವಾಸ ವೈದ್ಯ ಹಾಗೂ ಇತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ನಾಲ್ಕು ದಶಕಗಳ ನಂತರ ಸವದತ್ತಿ ನಗರದಲ್ಲಿ ಗ್ರಾಮದೇವಿಯ ಜಾತ್ರೆಯನ್ನು ಮಾಡಲು ಹಿರಿಯರೆಲ್ಲರೂ ನಿರ್ಧರಿಸಿರುವುದು ಸ್ವಾಗತಾರ್ಹವಾಗಿದ್ದು, ಎಲ್ಲ ಸಮಾಜದವರು ಸೇರಿಕೊಂಡು ಮಾಡುವ ಈ ಜಾತ್ರೆಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ನಾಲ್ಕು ದಶಕಗಳ ನಂತರ ಸವದತ್ತಿ ನಗರದಲ್ಲಿ ಗ್ರಾಮದೇವಿಯ ಜಾತ್ರೆಯನ್ನು ಮಾಡಲು ಹಿರಿಯರೆಲ್ಲರೂ ನಿರ್ಧರಿಸಿರುವುದು ಸ್ವಾಗತಾರ್ಹವಾಗಿದ್ದು, ಎಲ್ಲ ಸಮಾಜದವರು ಸೇರಿಕೊಂಡು ಮಾಡುವ ಈ ಜಾತ್ರೆಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಗ್ರಾಮದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಟ್ಟಣದಲ್ಲಿರುವ ಮೂಲ ಸ್ಥಳದಲ್ಲಿಯೇ ಗ್ರಾಮದೇವಿಯ ಪ್ರತಿಷ್ಠಾಪನೆ ಮಾಡಿ ಜಾತ್ರೆಯನ್ನು ಮಾಡಲು ನಿರ್ಧರಿಸುವ ಹಿರಿಯರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದು, ಕಟ್ಟಿ ಓಣಿಯಲ್ಲಿರುವ ಮೂಲ ಗ್ರಾಮದೇವಿಯ ಗುಡಿಯ ಜೀರ್ಣೋದ್ಧಾರವನ್ನು ಜಾತ್ರೆಗಿಂತ ಮುಂಚಿತವಾಗಿ ಹಿರಿಯರ ಮಾರ್ಗದರ್ಶನದಲ್ಲಿ ಮಾಡುವುದಾಗಿ ಭರವಸೆ ನೀಡಿದರು.ಬಿಜೆಪಿ ಮುಖಂಡರಾದ ವಿರುಪಾಕ್ಷ ಮಾಮನಿ ಮಾತನಾಡಿ, ಸಾರ್ವಜನಿಕರ ಅಭಿಪ್ರಾಯದಂತೆ ೨೦೨೬ರ ಮೇ ತಿಂಗಳಲ್ಲಿ ಗ್ರಾಮದೇವಿ ಜಾತ್ರೆಯನ್ನು ಮಾಡಲು ಎಲ್ಲರ ಒಪ್ಪಿಗೆಯಂತೆ ಒಂದು ತೀರ್ಮಾನಕ್ಕೆ ಬರಲಾಗಿದೆ. ೨೦೨೬ರ ಯುಗಾದಿ ಸಂದರ್ಭದಲ್ಲಿ ಕಾಯಿ ಕಟ್ಟುವ ಮೂಲಕ ಜಾತ್ರೆಯ ತಯಾರಿಯನ್ನು ಮಾಡಲಾಗುವುದು ಎಂದರು.ಸಾರ್ವಜನಿಕರು ಯುಗಾದಿ ಹಬ್ಬದೊಳಗಾಗಿ ತಮ್ಮ ಮನೆಯಲ್ಲಿನ ಮದುವೆ ಮತ್ತು ಇನ್ನಿತರೆ ಶುಭ ಕಾರ್ಯ ಮತ್ತು ಉಡಿ ತುಂಬುವ ಕಾರ್ಯಗಳನ್ನು ಮಾಡಿಕೊಳ್ಳಬೇಕು. ಸದ್ಯದಲ್ಲಿ ಮತ್ತೆ ಸಭೆಯನ್ನು ಕರೆದು ಜಾತ್ರಾ ಮಹೋತ್ಸವದ ವಿವಿಧ ಸಮಿತಿಗಳನ್ನು ರಚಿಸಲಾಗುತ್ತದೆ. ಪಟ್ಟಣದಲ್ಲಿರುವ ಎಲ್ಲ ಸಮಾಜದವರನ್ನು ಸೇರಿಸಿಕೊಂಡು ಈ ಜಾತ್ರೆಯನ್ನು ಮಾಡಲು ನಿರ್ಧರಿಸಲಾಗಿರುವುದರಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಇಲಾಖೆ ಸೇರಿದಂತೆ ಇನ್ನುಳಿದ ಇಲಾಖೆಗಳ ಸಹಕಾರವು ಈ ಜಾತ್ರೆಗೆ ಅವಶ್ಯ ಎಂದರು.

ಅಡಿವೆಪ್ಪ ಬೀಳಗಿ ಮಾತನಾಡಿ, ಪಟ್ಟಣದ ೧೬ ಜನ ಪ್ರಮುಖ ರೈತ ಕುಟುಂಬದವರ ನೇತೃತ್ವದಲ್ಲಿ ೧೯೮೧-೮೨ರಲ್ಲಿ ಲಿಂ.ಸಿ.ಎಂ.ಮಾಮನಿಯವರ ಮುಖಂಡತ್ವದಲ್ಲಿ ಈ ಜಾತ್ರೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಈಗ ಮಾಡಲು ಹೊರಟಿರುವ ಜಾತ್ರೆಯನ್ನು ಮೂಲ ಸಂಪ್ರದಾಯದಂತೆ ಹಿರಿಯರು ಹಾಕಿಕೊಟ್ಟ ಹಳೆಯ ಪದ್ದತಿಗೆ ದಕ್ಕೆ ಬರದಂತೆ ವ್ಯವಸ್ಥಿತವಾಗಿ ಮಾಡಲು ಪಟ್ಟಣದ ಪ್ರತಿಯೊಬ್ಬ ನಾಗರೀಕರು ಸಹಕಾರ ನೀಡಬೇಕು ಎಂದು ಕೋರಿದರು.ರತ್ನಕ್ಕ ಆನಂದ ಮಾಮನಿ ಮಾತನಾಡಿ, ಗ್ರಾಮದೇವಿಯ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದ್ದು, ಪಟ್ಟಣದಲ್ಲಿನ ಎಲ್ಲ ಮಹಿಳೆಯರಿಗೂ ಜಾತ್ರೆಯಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಾನೂ ಜವಾಬ್ದಾರಿಯಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಸದಾಶಿವ ಕೌಜಲಗಿ, ಜಗದೀಶ ಶಿಂತ್ರಿ, ಡಾ.ಎನ್.ಸಿ.ಬೆಂಡಿಗೇರಿ, ಬಸವರಾಜ ಕಾರದಗಿ ಮಾತನಾಡಿ, ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ನಡೆಸುವ ಈ ಗ್ರಾಮದೇವಿಯ ಜಾತ್ರೆಯಲ್ಲಿ ಪ್ರತಿಯೊಬ್ಬರು ನಿಸ್ವಾರ್ಥ ಭಾವನೆಯಿಂದ ಭಾಗವಹಿಸಬೇಕಿದೆ. ಇಲ್ಲಿ ಮಹಿಳೆಯರಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.ಈ ವೇಳೆ ಮಹಾಬಳೇಶ್ವರ ಪುರದಗುಡಿ, ಶಿವಾನಂದ ಹೂಗಾರ, ಎಲ್.ಆರ್.ಕುಲಕರ್ಣಿ, ಸುಭಾಸ ರಜಪುತ, ಚಂದ್ರಣ್ಣ ಶಾಮರಾಯನವರ, ಬಾಬು ಕಾಳೆ, ಬಸವರಾಜ ಅತ್ತಿಗೇರಿ, ಬಿ.ಎನ್.ಪ್ರಭುನವರ, ಕುಮಾರಸ್ವಾಮಿ ತಲ್ಲೂರಮಠ, ಭರಮಪ್ಪ ಅಣ್ಣಿಗೇರಿ, ಶ್ರೀಶೈಲ್ ಮುತಗೊಂಡ, ಬಸವರಾಜ ಹಂಪಣ್ಣವರ, ಕೆ.ಕೆ.ಪುಣೇದ, ಆಶೀಪ್ ಬಾಗೋಜಿಕೊಪ್ಪ, ರಾಮಣ್ಣ ಬ್ಯಾಹಟ್ಟಿ, ಮದನಲಾಲ ಚೋಪ್ರಾ, ಸಿಪಿಐ ಧರ್ಮಾಕರ ಧರ್ಮಟ್ಟಿ, ಸಿ.ಬಿ.ದೊಡಗೌಡರ, ಹಾಗೂ ಪಟ್ಟಣದ ಎಲ್ಲ ಓಣಿಯ ಹಿರಿಯರು ಮತ್ತು ನಾಗರೀಕರು ಉಪಸ್ಥಿತರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ