ಉರಗಹಳ್ಳಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿಯ ಅಂತ್ಯಕ್ರಿಯೆ

KannadaprabhaNewsNetwork | Published : Mar 1, 2024 2:19 AM

ಸಾರಾಂಶ

ಕಳೆದ 20 ದಿನಗಳಿಂದ ಅನಾರೋಗ್ಯದ ಕಾರಣ ಕೆ.ಶಿವರಾಂರವರು ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಹೃದಯಾಘಾತವಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಅನಾರೋಗ್ಯದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರ ಅಂತ್ಯಕ್ರಿಯೆಯನ್ನು ಬಿಡದಿ ಹೋಬಳಿ ಉರಗಹಳ್ಳಿಯಲ್ಲಿರುವ ಅವರ ಫಾರಂ ಹೌಸ್‌ನಲ್ಲಿ ನೆರವೇರಿಸಲು ಸಕಲ ಸಿದ್ಧತೆಗಳು ನಡೆದಿವೆ.

ಕಳೆದ 20 ದಿನಗಳಿಂದ ಅನಾರೋಗ್ಯದ ಕಾರಣ ಕೆ.ಶಿವರಾಂರವರು ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಹೃದಯಾಘಾತವಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಶುಕ್ರವಾರ ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುವುದು. ನಂತರ ಉರಗಹಳ್ಳಿಯ ಕೆ.ಶಿವರಾಂ ಅವರ ಫಾರಂ ಹೌಸ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಕೆ. ಶಿವರಾಂ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಪಾಸ್ ಮಾಡಿದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕೆ.ಶಿವರಾಂರವರು ಚಿತ್ರನಟ, ರಾಜಕಾರಣಿ ಆಗಿದ್ದವರು.

ಐಎಎಸ್ ಅಧಿಕಾರಿ,ಚಿತ್ರನಟ,ರಾಜಕಾರಣಿಯಾಗಿ ಶಿವರಾಂ ಚಿರಸ್ಥಾಯಿ:

ಬಿಡದಿ ಹೋಬಳಿ ಉರಗಹಳ್ಳಿ ಗ್ರಾಮದ ವಾಸಿ ಕೆಂಪಯ್ಯ ಚಿಕ್ಕಬೋರಮ್ಮ ದಂಪತಿ ಪುತ್ರರಾಗಿ 1956ರ ಏಪ್ರಿಲ್ 6 ರಂದು ಜನಿಸಿದರು. ಉರಗಹಳ್ಳಿ ಸಮೀಪದ ಮೇಗಳದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ, ರಾಮನಹಳ್ಳಿ ಆಶ್ರಮದಲ್ಲಿ ಆಶ್ರಯ ಪಡೆದು ಭೈರಮಂಗಲ ವೃಷಭಾವತಿ ಗ್ರಾಮಾಂತರ ಶಾಲೆಯಲ್ಲಿ 5ರಿಂದ 7ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದರು.

ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿ, ವಿವಿ ಪುರಂನ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕರಸ್ಪಾಂಡೆಂಟ್ ಮೂಲಕ ಪದವಿ ಮುಗಿಸಿದ್ದರು. 1982ರಲ್ಲಿ ಮೈಸೂರು ಯುನಿವರ್ಸಿಟಿಯಿಂದ ಇತಿಹಾಸ ವಿಷಯದಲ್ಲಿ ಮಾಸ್ಟರ್ ಆಫ್ ಆರ್ಟ್ಸ್(ಎಂ.ಎ) ಪದವಿ ಪಡೆದರು. 1985ರಲ್ಲಿ ಕೆ.ಎ.ಎಸ್ ಪರೀಕ್ಷೆ ಬರೆದು ಉತ್ತೀರ್ಣರಾದರು. ನಂತರ 2005-06ರಲ್ಲಿ ಕನ್ನಡ ಭಾಷೆಯಲ್ಲಿಯೇ ಐ.ಎ.ಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಐಎಎಸ್ ಅಧಿಕಾರಿಯಾಗಿದ್ದಾಗ ಬೆಂಗಳೂರು, ಮೈಸೂರು, ಬಿಜಾಪುರ, ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಜಿಲ್ಲಾಕಾರಿಯಾಗಿದ್ದರು. ಸಮಾಜಕಲ್ಯಾಣ ಇಲಾಖೆಯ ಆಯುಕ್ತರಾಗಿ ಉತ್ತಮ ಅಧಿಕಾರಿ ಎಂದು ಹೆಸರು ಗಳಿಸಿದ್ದರು.

ಐಎಎಸ್ ಅಧಿಕಾರಿಯಾಗಿದ್ದರೂ ಸಹ ಅಭಿನಯದ ಗೀಳು ಹಚ್ಚಿಕೊಂಡಿದ್ದ ಶಿವರಾಂ ಅವರು 1992ರಲ್ಲಿ ತೆರೆಕಂಡ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ "ಬಾ ನಲ್ಲೆ ಮಧುಚಂದ್ರಕೆ " ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ವಸಂತಕಾವ್ಯ, ಸಾಂಗ್ಲಿಯಾನ ಭಾಗ- 3, ಪ್ರತಿಭಟನೆ, ಖಳನಾಯಕ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್, ನಾಗ, ಓ ಪ್ರೇಮ ದೇವತೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

2013ರಲ್ಲಿ ನಿವೃತ್ತಿಯ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ ಶಿವರಾಂ, 2014ರಲ್ಲಿ ಜೆಡಿಎಸ್ ಸೇರಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ ಅದೇ ವರ್ಷ ದಲಿತರಿಗೆ ಸಿಎಂ ಪಟ್ಟ ಸಿಗಬೇಕೆಂದು ಜಿ.ಪರಮೇಶ್ವರ್ ಅವರನ್ನು ಬೆಂಬಲಿಸಿ ಕಾಂಗ್ರೆಸ್‌ ಗೆ ಮರಳಿದರು. ಆದರೆ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಗದ ಕಾರಣ ಬಿಜೆಪಿ ಸೇರಿದರು.

ಛಲವಾದಿ ಮಹಾಸಭಾದ ಅಧ್ಯಕ್ಷರಾಗಿದ್ದರು. ಕಳೆದ 7 ವರ್ಷಗಳಿಂದ ಬಿಜೆಪಿ ಯಲ್ಲಿ ಸಕ್ರೀಯ ಕಾರ್ಯಕರ್ತರಾಗಿದ್ದರು. ದಲಿತಪರ ಹೋರಾಟಗಳಲ್ಲಿ ಕೆ.ಶಿವರಾಂ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.

ಉರಗಹಳ್ಳಿಯಲ್ಲಿ ನಾನು ಮತ್ತು ಶಿವರಾಂ ಬಾಲ್ಯದ ದಿನಗಳನ್ನು ಕಳೆದವರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಾನು ಪಾಸಾದರೆ, ಶಿವರಾಂ ಫೇಲಾಗಿದ್ದ. ನಂತರ ಸಂಜೆ ಕಾಲೇಜಿನಲ್ಲಿ ಓದಿ ಕರಾಸ್ಪೆಂಡೆಂಟ್‌ನಲ್ಲಿ ಪದವಿ ಮುಗಿಸಿದನು. ಆತ ತೀರಾ ಬಡತನದಲ್ಲಿ ಬೆಳೆದು ಮೇಲೇರಿದ ಸಾಹಸಿ. ಗೆಳೆಯನ ನಿಧನದ ಸುದ್ಧಿ ಕೇಳಿ ಮನಸ್ಸಿಗೆ ನೋವಾಯಿತು.

-ಕಂಚೀವರದಯ್ಯ, ಕೆ.ಶಿವರಾಂ ಅವರ ಬಾಲ್ಯ ಸ್ನೇಹಿತ, ಬೆಂಗಳೂರು.

Share this article