ಕಾರವಾರ: ಮಣ್ಣಿನ ಮುದ್ದೆಗೆ ರೂಪ ಕೊಟ್ಟು, ಅದರಲ್ಲಿ ಭಕ್ತಿ, ಭಾವನೆ ಹಾಗೂ ಕಲಾತ್ಮಕತೆಯನ್ನು ಅರಳಿಸುವ ಅಪರೂಪದ ಕಲಾವಿದ ಕೆಕ್ಕಾರ ಜಿ.ಡಿ. ಭಟ್. ಅವರ ಕೈಯಿಂದ ಮೂಡುವ ಗಣಪತಿ ಮೂರ್ತಿಗಳನ್ನು ನೋಡುವುದೇ ಒಂದು ಸೊಗಸಾದ ಅನುಭವ.
ಗಣಪನ ಮುಖಭಾವ, ಕಿರೀಟ, ಆಭರಣ, ಕೈ- ಕಾಲುಗಳ ಪ್ರಮಾಣ ಸೇರಿದಂತೆ ಪ್ರತಿಯೊಂದು ಸೂಕ್ಷ್ಮ ವಿವರಕ್ಕೂ ಅವರು ನೀಡುವ ಗಮನವೇ ಮೂರ್ತಿಗಳಿಗೆ ವಿಶಿಷ್ಟ ಮೆರುಗು ನೀಡುತ್ತದೆ.
ಹರೆಯದಲ್ಲೆ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡ ಅವರು ಸುಮಾರು ಐದು ದಶಕಗಳಿಂದ ಈ ಕಲಾ ಸೇವೆ ಮುಂದುವರಿಸಿದ್ದಾರೆ.ಸಣ್ಣ ಮೂರ್ತಿಗಳಿಂದ ಹಿಡಿದು ಬೃಹತ್ ವಿಗ್ರಹಗಳವರೆಗೆ ಅವರ ಕೈಚಳಕದಲ್ಲಿ ಅರಳಿವೆ. ಗರುಡವಾಹನ ಗಣಪ, ಇಡಗುಂಜಿ ಮಾದರಿ, ಯಕ್ಷಗಾನ ಗಣಪ, ಕೊಳಲು ನುಡಿಸುವ ಕೃಷ್ಣ ಹಾಗೂ ನಾಟ್ಯಮಾಡುವ ಗಣಪನಂತಹ ವಿಭಿನ್ನ ಕಲ್ಪನೆಗಳು ಅವರ ಸೃಜನಶೀಲತೆಗೆ ಸಾಕ್ಷಿ.
ಅವರ ಕೈಯಲ್ಲಿ ಮಣ್ಣು ಕೇವಲ ಮಣ್ಣಾಗಿ ಉಳಿಯುವುದಿಲ್ಲ; ಅದು ಭಕ್ತಿಯ ರೂಪ ಪಡೆದು ಭಗವಂತನಾಗುತ್ತದೆ. ಇಂತಹ ಅಪರೂಪದ ಸಾಂಪ್ರದಾಯಿಕ ಕಲಾವಿದರನ್ನು ಗುರುತಿಸಿ, ಅವರ ಕಲೆಗೆ ಸೂಕ್ತ ಗೌರವ ಹಾಗೂ ಮುಂದಿನ ಪೀಳಿಗೆಗೆ ತರಬೇತಿ ದೊರಕಿಸುವ ಅಗತ್ಯತೆ ಇದೆ.16ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ
ದಾಂಡೇಲಿ: ಗಾಂಧಿನಗರದ ಶ್ರೀ ಗಣೇಶ ಹಿಂದೂ- ಮುಸ್ಲಿಂ- ಕ್ರೈಸ್ತ ಯುವಕ ಮಂಡಳದ ಆಶ್ರಯದಡಿ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಭಾಗಿತ್ವದಲ್ಲಿ ಸೆ. 16ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಯುವಕ ಮಂಡಳದ ಅಧ್ಯಕ್ಷ ಸಂದೇಶ್ ಎಸ್. ಜೈನ್ ತಿಳಿಸಿದರು.ಭಾನುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಕೋಮು ಸೌಹಾರ್ದತೆ ಹಾಗೂ ಮಾನವೀಯತೆಯ ಸಂದೇಶ ಸಾರುವ ಈ ಉದಾತ್ತ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಶ್ರೀ ಗಣೇಶ ಹಿಂದೂ- ಮುಸ್ಲಿಂ- ಕ್ರೈಸ್ತ ಯುವಕ ಮಂಡಳದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.