ಗದಗ:
ರಾಜ್ಯದಲ್ಲಿಯೇ ಗದಗ ಜಿಲ್ಲೆ ಒಂದು ಉತ್ತಮ ಪ್ರವಾಸಿ ಸ್ಥಾನವಾಗಿದೆ. ಕೃತಪುರ ಎಂಬ ನಗರ ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು, ಕುಮಾರವ್ಯಾಸರ ಕಾಲದಿಂದಲೂ ವೀರನಾರಾಯಣ ದೇವಾಲಯ, ತ್ರಿಕೂಟೇಶ್ವರ ದೇವಾಲಯಗಳ ಕಲೆ, ಶಿಲ್ಪಕಲೆ ಕೆತ್ತನೆಯ ನೋಡುಗರ ಗಮನ ಸೆಳೆಯುತ್ತಿದ್ದು, ಇದೊಂದು ಐತಿಹಾಸಿಕ ಸ್ಥಳವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.ನಗರದ ಮಹಾತ್ಮಗಾಂಧಿ ಆರ್‌ಡಿಪಿಆರ್ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವೆಲ್ ಕನೆಕ್ಟ್-2025ರ ಗದಗ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಬಾಲಕೋಟೆ, ವಿಜಯಪುರ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಡೆದ ಗದಗ ಜಿಲ್ಲೆಯ ಕನೆಕ್ಟ್-2025ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲಕ್ಕುಂಡಿ ಗ್ರಾಮದಲ್ಲಿ ಇರುವಂತಹ ಕಲಾಕೃತಿ, ಐತಿಹಾಸಿಕ 101 ಬಾವಿಗಳು, ವಿಶೇಷ ಕೆತ್ತನೆಯ ಮೂಲಕ ಹಲವಾರು ದೇವಾಲಯ, ಶಾಸನ, ಶಿಲಾಶಾಸನ, ರಾಷ್ಟ್ರಮಟ್ಟದಲ್ಲಿ ಕಣ್ಮನ ಸೆಳೆದ ಸ್ಥಳವಾಗಿದೆ. ಇಂದು ವಿಶ್ವದಲ್ಲಿಯೇ ಗಮನ ಸೆಳೆದ ಐತಿಹಾಸಿಕ ಸ್ಥಳವಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ 460 ಪ್ರವಾಸಿ ಸ್ಥಾನಗಳಲ್ಲಿ ಗದಗ ಜಿಲ್ಲೆಯಲ್ಲಿಯೇ 48 ಪ್ರವಾಸಿ ಸ್ಥಾನಗಳನ್ನು ಗುರುತಿಸಿರುವುದು ಜಿಲ್ಲೆಯ ಹೆಮ್ಮೆಯಾಗಿದೆ. ಪ್ರಮುಖವಾಗಿ ಜಿಲ್ಲೆಯಲ್ಲಿ ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಹಣ ಹೂಡಿಕೆ ಮಾಡುವಂತಹ ಸಂಸ್ಥೆ ಮತ್ತು ಏಜೆನ್ಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯಾಗಿದೆ. ಪ್ರವಾಸೋದ್ಯಮ ಇಲಾಖೆಗೆ ಇದೊಂದು ಐತಿಹಾಸಿಕ ಮೈಲುಗಲ್ಲು. ಹೂಡಿಕೆಗೆ ಎಲ್ಲ ರೀತಿಯಿಂದಲೂ ಉತ್ತಮ ವಾತಾವರಣ, ಆಕರ್ಷಣೀಯ ಸ್ಥಾನವಾಗಿದೆ ಎಂದರು.
ಕಪ್ಪತ್ತಗುಡ್ಡವು ಉತ್ತರ ಕರ್ನಾಟಕದ ಸಹ್ಯಾದ್ರಿ ಸಾಲುಗಳನ್ನು ಹೊಂದಿದ ಅತ್ಯಂತ ಸುಂದರ ಪ್ರೇಕ್ಷಣೀಯ ಸ್ಥಳವಾಗಿದೆ. ಕಪ್ಪತಗಿರಿಯಲ್ಲಿ ಸಫಾರಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ದೊರೆಯುವಂತಹ ಗಿಡಮೂಲಿಕೆ, ಔಷಧಿಯುಕ್ತ ಸಸ್ಯ ಹಾಗೂ ಏಷ್ಯಾ ಖಂಡದಲ್ಲಿಯೆ ಕಪ್ಪತಗಿರಿಯಲ್ಲಿ ಅತ್ಯಂತ ಶುದ್ಧ ಗಾಳಿ ಇರುವ ವಾತಾವರಣ ನಮ್ಮ ಜಿಲ್ಲೆಯಾಗಿದೆ ಎಂದು ಹೇಳಿದರು.ನಗರದಲ್ಲಿರುವ 108 ಅಡಿಯ ಬಸವಣ್ಣನವರ ಏಕತೆ ಸಾರುವ ಮೂರ್ತಿ ನೋಡಲು ಸಾವಿರಾರು ಜನರು ಪ್ರತಿದಿನ ಆಗಮಿಸುತ್ತಾರೆ ಎಂದ ಸಚಿವರು, ಭೀಷ್ಮ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿದ್ದ ಜನರು ಅದರ ಅನುಭವ ಪಡೆಯುತ್ತಿದ್ದಾರೆ ಎಂದರು.
ಬಿಂಕದಕಟ್ಟಿಯ ಮೃಗಾಲಯ ವಿಸ್ತರಿಸಿ ಅಭಿವೃದ್ಧಿ ಮಾಡುತ್ತಿದ್ದು, ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಸಾರ್ವಜನಿಕರಿಗೆ ಜಿಪ್‌ಲೈನ್ ಅಳವಡಿಕೆ ಮಾಡಲಾಗಿದೆ ಎಂದರು.ಈ ವೇಳೆ ಪ್ರವಾಸೋದ್ಯಮ ಇಲಾಖೆ ಆಯುಕ್ತ ಅಕ್ರಂ ಪಾಷಾ, ಕೆಎಸ್‌ಎಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಮಿಶ್ರ, ಪ್ರಶಾಂತ ಸಂಕಿಣಮಠ, ವಿವಿ ಕುಲಸಚಿವ ಡಾ. ಸುರೇಶ ನಾಡಗೌಡರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಎಸ್.ಎನ್. ಬಳ್ಳಾರಿ, ಲಕ್ಕುಂಡಿ ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ, ದಾಸನೂರು ಹಾಗೂ ಉತ್ತರ ಕರ್ನಾಟಕ ಭಾಗದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇದ್ದರು.